ಸುಳ್ಳು ಮಾಹಿತಿ ನೀಡಿ ಲಕ್ಷಾಂತರ ರು. ಪ್ರಯಾಣ ಭತ್ಯೆ ಪಡೆದು ಸರ್ಕಾರವನ್ನು ವಂಚಿಸಿರುವ ವಿಧಾನ ಪರಿಷತ್‌ನ ಎಂಟು ಜನ ಕಾಂಗ್ರೆಸಿಗರ ಸದಸ್ಯತ್ವವನ್ನು ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.
ಬೆಂಗಳೂರು (ಮೇ.03): ಸುಳ್ಳು ಮಾಹಿತಿ ನೀಡಿ ಲಕ್ಷಾಂತರ ರು. ಪ್ರಯಾಣ ಭತ್ಯೆ ಪಡೆದು ಸರ್ಕಾರವನ್ನು ವಂಚಿಸಿರುವ ವಿಧಾನ ಪರಿಷತ್ನ ಎಂಟು ಜನ ಕಾಂಗ್ರೆಸಿಗರ ಸದಸ್ಯತ್ವವನ್ನು ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಂಟು ಜನ ಎಂಎಲ್ಸಿಗಳು ಸುಳ್ಳು ಮಾಹಿತಿ ನೀಡಿ ಸಾರಿಗೆ ಭತ್ಯೆ ಪಡೆದಿರುವ ಸಂಬಂಧ ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ) ಮೂಲಕ ಪಡೆದಿರುವ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ರಾಮಪ್ಪ ತಿಮ್ಮಾಪುರ, ಎನ್.ಎಸ್.ಬೋಸ ರಾಜು, ರಘು ಆಚಾರ್, ಎಸ್.ರವಿ, ಸಿ.ಆರ್. ಮನೋಹರ್, ಅಪ್ಪಾಜಿಗೌಡ ಮತ್ತು ಎಂ.ಡಿ. ಲಕ್ಷ್ಮಿನಾರಾಯಣ ಅವರು ಕ್ರಮವಾಗಿ ತಾವು ಆಯ್ಕೆಯಾಗಿರುವ ಬಳ್ಳಾರಿ, ಬಾಲಗಕೋಟೆ, ರಾಯಚೂರು, ಚಿತ್ರದುರ್ಗ, ರಾಮನಗರ, ಕೋಲಾರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದರು. ೨೦೧೬ರ ಬಿಬಿಎಂಪಿ ಮೇಯರ್ ಚುನಾವಣೆ ಸಮಯದಲ್ಲಿ ತಾವು ಬೆಂಗಳೂರಿನಲ್ಲಿ ವಾಸವಿರುವುದಾಗಿ ಘೋಷಿಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಮತದಾನವನ್ನೂ ಮಾಡಿದ್ದಾರೆ. ಆದರೆ, ಆನಂತರವೂ ತಾವು ಈ ಹಿಂದೆ ವಾಸವಿದ್ದ ತಮ್ಮ ತಮ್ಮ ಜಿಲ್ಲೆಗಳಲ್ಲೇ ವಾಸವಿರುವುದಾಗಿ ಸುಳ್ಳು ಮಾಹಿತಿ ನೀಡಿ ಒಟ್ಟಾರೆ ೩೨,೯೨,೫೦೦ ರೂ. ರು. ಪ್ರಯಾಣ ಭತ್ಯೆ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಆರ್ಟಿಐ ಮೂಲಕ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅಲ್ಲಂ ವೀರಭದ್ರಪ್ಪ ಕಳೆದ ಆರು ತಿಂಗಳಿಂದ ೩.೨೦ ಲಕ್ಷ ರು., ರಾಮಪ್ಪ ತಿಮ್ಮಾಪುರ ೫.೫೧ ಲಕ್ಷ , ಬೋಸರಾಜು ೫.೭೦ ಲಕ್ಷ, ರಘು ಆಚಾರ್ ೩.೪೩ ಲಕ್ಷ, ಎಸ್.ರವಿ ೨.೩೬ ಲಕ್ಷ, ಸಿ.ಆರ್.ಮನೋಹರ್ ೧.೨೪ ಲಕ್ಷ, ಅಪ್ಪಾಜಿಗೌಡ ೨.೯೧ ಲಕ್ಷ ಮತ್ತು ಎಂ.ಡಿ. ಲಕ್ಷ್ಮಿನಾರಾಯಣ ೪.೪೬ ಲಕ್ಷ ರು. ಪ್ರಯಾಣ ಭತ್ಯೆ ಪಡೆದುಕೊಂಡಿದ್ದಾರೆ. ಈ ಎಲ್ಲರೂ ಬೆಂಗಳೂರಿನಲ್ಲೇ ವಾಸವಿದ್ದರೂ ತಮ್ಮ ಜಿಲ್ಲೆಗಳಿಂದ ಪ್ರಯಾಣ ಮಾಡಿರುವುದಾಗಿ ಸುಳ್ಳು ಮಾಹಿತಿ ನೀಡಿ ಸರ್ಕಾರಕ್ಕೆ ವಂಚಿಸಿದ್ದಾರೆ. ಸಭಾಪತಿ ಅವರು ಈ ಎಂಟೂ ಜನರ ಸದಸ್ಯತ್ವ ರದ್ದು ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಎಂಟೂ ಜನ ಸದಸ್ಯರು ೨೦೧೬ರ ಬಿಬಿಎಂಪಿ ಮೇಯರ್ ಚುನಾವಣೆಗೂ ಮೊದಲು ತಮ್ಮ ಜಿಲ್ಲೆಗಳ ನಗರ ಪಾಲಿಕೆ ಚುನಾವಣೆಗಳಲ್ಲಿ ಮತದಾನ ಮಾಡಿದ್ದರು. ಬಿಬಿಎಂಪಿ ಮೇಯರ್ ಚುನಾವಣೆ ವೇಳೆಯಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವುದಾಗಿ ಹೇಳಿ ನಗರದ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡಿದ್ದರು. ಇದಕ್ಕೆ ಪ್ರಸ್ತುತ ಪ್ರಯಾಣ ಭತ್ಯೆಗೆ ನೀಡಿರುವ ಸುಳ್ಳು ಮಾಹಿತಿ ಸಾಕ್ಷಿಯಾಗಲಿದೆ ಎಂದ ಪದ್ಮನಾಭರೆಡ್ಡಿ, ತಕ್ಷಣ ಈ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.
![]()
