ಶಾಸಕರ ಬರ ವಿಧಾನಸಭೆಯನ್ನ ಕಾಡುತ್ತಿದೆ. ಇದು ಒಂದೆರಡು ದಿನದ ಪ್ರಶ್ನೆಯಲ್ಲ. ಕಳೆದ ಐದೂ ದಿನದ ಕಲಾಪದಲ್ಲಿ ವಿಧಾನಸಭೆಯಲ್ಲಿ ಶಾಸಕರ ಬರ ಸದ್ದು ಮಾಡಿದೆ.
ಬೆಂಗಳೂರು (ಜೂ.09): ಶಾಸಕರ ಬರ ವಿಧಾನಸಭೆಯನ್ನ ಕಾಡುತ್ತಿದೆ. ಇದು ಒಂದೆರಡು ದಿನದ ಪ್ರಶ್ನೆಯಲ್ಲ. ಕಳೆದ ಐದೂ ದಿನದ ಕಲಾಪದಲ್ಲಿ ವಿಧಾನಸಭೆಯಲ್ಲಿ ಶಾಸಕರ ಬರ ಸದ್ದು ಮಾಡಿದೆ.
ವಿಧಾನಮಂಡಲದ ಮಳೆಗಾಲದ ಅಧಿವೇಶನದ ಐದನೇ ದಿನವೂ ಕೂಡ ಸಚಿವರು ಹಾಗೂ ಶಾಸಕರ ಗೈರುಹಾಜರಿ ಚರ್ಚೆಗೆ ಗ್ರಾಸವಾಯ್ತು. ಕಳೆದ ನಾಲ್ಕು ದಿನಗಳಲ್ಲೂ ಕೂಡ ಪ್ರತಿ ನಿತ್ಯ ಬರಗಾಲದ ಚರ್ಚೆಯ ನಡುವೆ ಶಾಸಕರ ಬರ ಸದನದಲ್ಲಿ ಸದ್ದು ಮಾಡಿತ್ತು.
ವಿಧಾನಸಭಾ ಅಧಿವೇಶನದ ಮೊದಲ ಮೂರು ದಿನ ಬರಗಾಲದ ಕುರಿತ ಚರ್ಚೆ ನಡೆಯುವಾಗ ಶಾಸಕರ ಬರ ಸದನವನ್ನ ಬಹುವಾಗಿ ಕಾಡಿತ್ತು. ಈ ವೇಳೆ ವಿಪಕ್ಷ ಸದಸ್ಯರು ಸಚಿವರ ಗೈರುಹಾಜರಿಯ ವಿಚಾರವಾಗಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ರು. ಸ್ಪೀಕರ್ ಸರ್ಕಾರಕ್ಕೆ ಸೂಚನೆ ನೀಡಿ ಗೈರುಹಾಜರಾಗಿರುವ ಸಚಿವರ ಪಟ್ಟಿ ಓದುವ ಮೂಲಕ ಖಡಕ್ ಸಂದೇಶ ರವಾನಿಸಿದರು.
ವಿಧಾನಸಭೆಯಲ್ಲಿ ನಿನ್ನೆ 224 ಶಾಸಕರಲ್ಲಿ ಒಟ್ಟು ಹಾಜರಿದ್ದವರು ಕೇವಲ 62 ಶಾಸಕರು ಮಾತ್ರ. ಈ ಪೈಕಿ ಕಾಂಗ್ರೆಸ್ನ 30, ಬಿಜೆಪಿಯ 18, ಜೆಡಿಎಸ್ ನ 12 ಹಾಗೂ ಇಬ್ಬರು ಪಕ್ಷೇತರ ಶಾಸಕರು ಮಾತ್ರ ಹಾಜರಿದ್ದರು. ಇನ್ನು ಇವತ್ತು ಕಾಂಗ್ರೆಸ್ನ 33, ಬಿಜೆಪಿಯ 16, ಜೆಡಿಎಸ್ ನ 07 ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿ ಒಟ್ಟು 224 ಶಾಸಕರ ಪೈಕಿ ಕೇವಲ 58 ಶಾಸಕರು ಮಾತ್ರ ಹಾಜರಿದ್ದರು
ಶಾಸಕರು ಗೈರು ಹಾಜರಿಯಷ್ಟೇ ಅಲ್ಲದೇ, ಸಚಿವರ ಗೈರುಹಾಜರಿ ಕೂಡ ವಿಧಾನಸಭೆಯಲ್ಲಿ ಸದ್ದು ಮಾಡ್ತು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಚಿವರ ಗೈರುಹಾಜರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರು.
ಒಟ್ಟಾರೆ, ಬರಗಾಲದ ಚರ್ಚೆ ಮಾಡುವ ಮೂಲಕ ಬರಗಾಲದಿಂದ ತತ್ತರಿಸಿರುವ ರೈತರಿಗೆ ನೆರವು ಒದಗಿಸಿಕೊಡಬೇಕಾದ ಶಾಸಕರ ಬರವೇ ಸದನದಲ್ಲಿ ಪಕ್ಷಾತೀತವಾಗಿ ಸದ್ದು ಮಾಡ್ತಿದೆ. ಇನ್ನುಳಿದ ನಾಲ್ಕು ದಿನಗಳ ಅಧಿವೇಶನದಲ್ಲಾದ್ರೂ ಶಾಸಕರು ಕಲಾಪದಲ್ಲಿ ಭಾಗಿಯಾಗುವ ಮೂಲಕ ಶಾಸಕರ ಬರವನ್ನೂ ನೀಗಿಸಿ, ಬರದಿಂದ ತತ್ತರಿಸಿರುವ ರೈತರಿಗೆ ನ್ಯಾಯ ಕೊಡಿಸಲು ಬರುವರೇ ಅನ್ನೋದು ಜನರ ಪ್ರಶ್ನೆ.
