ಹುಬ್ಬಳ್ಳಿ(ಡಿ.14): ಇದು ಮಾಜಿ ಶಾಸಕರೊಬ್ಬರ ಖತರ್ನಾಕ್ ವಂಚನೆಯ ಕಥೆ. ರಸ್ತೆಯನ್ನು ನಿವೇಶನವಾಗಿ ಮಾರ್ಪಡಿಸಿ ಮಾರಾಟ ಮಾಡಿದ ಮಾಜಿ ಶಾಸಕ, ಖರೀದಿಗೆ ಬಂದವರಿಗೆ  ಪಕ್ಕದವರ ನಿವೇಶನ ತೋರಿಸಿ ಇದೇ ನನ್ನ ಜಾಗ ಎಂದು ಅರ್ಧ ಕೋಟಿಗೂ ಅಧಿಕ ಹಣ ಪೀಕಿದ್ದಾರೆ. ವಂಚನೆಗೊಳಗಾದ ಉದ್ಯಮಿ ಅತ್ತ ನಿವೇಶನವೂ ಇಲ್ಲ, ಇತ್ತ ಹಣನೂ ಇಲ್ಲದೆ ಕಂಗಾಲಾಗಿದ್ದಾರೆ.

ಅಧಿಕಾರಿಗಳ ಜೊತೆ ಸೇರಿ ನಾಮ ಹಾಕಿದ ಜನಪ್ರತಿನಿಧಿ

ಇದು ಮಾಜಿ ಶಾಸಕರೊಬ್ಬರ ೪೨೦ ಕೆಲಸದ ಸ್ಟೋರಿ. ಅವರು ಬೇರಾರು ಅಲ್ಲ, ಕುಂದಗೋಳದ ಮಾಜಿ ಎಂಎಲ್​'ಎ  ಹಾಗೂ ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಸಹದೇವಪ್ಪ  ಅಕ್ಕಿ. ಇವರಿಗೆ ಸಾಥ್ ನೀಡಿದ್ದು ಪಾಂಡಪ್ಪ ಪಾಟೀಲ್ ಹಾಗೂ ಶಂಕರಗೌಡ ನಿರಂಜನಗೌಡ ಎಂಬ ಆಪ್ತರು. ಇವರು ಪಂಗನಾಮ ಹಾಕಿದ್ದು ಬರೋಬ್ಬರಿ 52 ಲಕ್ಷ.

ಇವರು ಹಣ ಮಾಡಲು ಆಯ್ಕೆ ಮಾಡ್ಕೊಂಡಿದ್ದು ರಸ್ತೆಯನ್ನು ಹುಬ್ಬಳ್ಳಿಯ ಉಣಕಲ್ ಗ್ರಾಮದ ೧೯೫/ಎಫ್-೧ ಸರ್ವೆ ನಂಬರ್​ನಲ್ಲಿರುವ ೭ ಗುಂಟೆ ರಸ್ತೆ ಜಾಗದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಜೊತೆ ಸೇರಿ ದಾಖಲೆಯಲ್ಲಿ ನಿವೇಶವನ್ನಾಗಿ ಮಾರ್ಪಡಿಸಿದ್ದಾರೆ. ಲೇಔಟ್ ನಕಾಶೆ ಕೂಡ ರೆಡಿ ಮಾಡಿಸಿದ್ದಾರೆ. ಇವೆಲ್ಲವೂ ನಕಲಿ ಇದ್ಯಾವುದೂ ಗೊತ್ತಿರದ ಬೆಳಗಾವಿ ಮೂಲದ  ರಿಯಲ್ ಎಸ್ಟೇಟ್ ಉದ್ಯಮಿ ದತ್ತ ಕೃಪ ಬಿಲ್ಡರ್ಸ್  ಹಿಂದುಮುಂದು ಯೋಚಿಸದೇ ೫೨ ಲಕ್ಷಕ್ಕೆ  ನಿವೇಶನ ಖರೀದಿಸಿದ್ದಾರೆ.. ನಾಮಫಲಕ ಹಾಕಲು ಹೋದಾಗ ವಂಚನೆ ಕಹಾನಿ ಬಯಲಾಗಿದೆ.

ಪ್ರಭಾವ ಬಳಸಿ ವಂಚಿಸಿದ ಮಾಜಿ ಶಾಸಕ

ಇನ್ನೂ ಉದ್ಯಮಿ ಜಾಗ ಖರೀದಿಗೂ ಮುನ್ನ ಸ್ಪಾಟ್​ಗೆ ಹೋದಾಗ ಬೇರೆಯವರ ಜಾಗ ತೋರಿಸಿ ಇದೇ ನನ್ನ ಜಾಗ ಎಂದು ನಂಬಿಸಿ ಬಿಟ್ಟಿದ್ದ.. ಅದನ್ನೇ ನಂಬಿ 52 ಲಕ್ಷ ಹಣ ಕೊಟ್ಟು ಮೋಸ ಹೋಗಿದ್ದಾರೆ. ಇದಾದ ಬಳಿಕ ಉದ್ಯಮಿ ನಿಮ್ಮ ಜಾಗ ನೀವೆ ಇಟ್ಕೊಳ್ಳಿ. ನನ್ನ ಹಣ ನನಗೇ ವಾಪಾಸ್ ಕೊಡಿ ಎಂದರೇ ವಂಚಕ ಮಾಜಿ ಶಾಸಕ ಕೈಗೇ ಸಿಗುತ್ತಿಲ್ಲವಂತೆ.

ಈ ಕುರಿತಾಗಿ ವಿಚಾರಿಸಲು ಶಾಸಕರಿಗೆ ಕರೆ ಮಾಡಿದರೆ 'ನನ್ನ ಪಾರ್ಟನರ್ಸ್ ಮಾತನಾಡ್ತಾರೆ' ಎಂದು ಫೋನ್ ಕಟ್ ಮಾಡಿದ್ದಾರೆ. ಒಟ್ಟಿನಲ್ಲಿ  ಜನಪ್ರತಿನಿಧಿಯೇ ಇಲ್ಲಿ ಅಧಿಕಾರಿಗಳನ್ನ ಬಳಸಿಕೊಂಡು ಅಕ್ರಮ ಎಸಗಿದ್ದು, ತಕ್ಕ ಶಿಕ್ಷೆ ಆಗಬೇಕಿದೆ.