Asianet Suvarna News Asianet Suvarna News

'ಗಾಂಧೀಜಿ ಕನಸು ನನಸಿಗೆ ಇಡೀ ದೇಶ ಒಂದಾಗಿದೆ'

ಸ್ವಚ್ಛ ಭಾರತ ಮಿಷನ್ ನಮ್ಮ ಗೌರವ ಹಾಗೂ ಉತ್ತಮ ಭವಿಷ್ಯಕ್ಕೆ ಸಂಬಂಧಿಸಿದ್ದು. ಪ್ರಕೃತಿಯ ಕರೆಗೆ ಹೋಗುವಾಗ ಪ್ರತಿದಿನ ಬೆಳಿಗ್ಗೆ ತಮ್ಮ ಮುಖ ಮುಚ್ಚಿಕೊಳ್ಳುವ ಕಷ್ಟದಿಂದ ಇದು ಮಹಿಳೆಯರಿಗೆ ಮುಕ್ತಿ ನೀಡಿದೆ. ನೈರ್ಮಲ್ಯದ ಕೊರತೆಯಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯದಿಂದ ನಮ್ಮ ಮಕ್ಕಳನ್ನು ಇದು ಕಾಪಾಡುತ್ತಿದೆ.

MK Gandhi 150 Yrs India United To Make Gandhijis Dream Come True PM Modi
Author
Bengaluru, First Published Oct 2, 2018, 12:11 PM IST

ನಮ್ಮ ಪ್ರೀತಿಯ ಬಾಪೂ ಅವರ 150ನೇ ಜನ್ಮ ವರ್ಷಾಚರಣೆಯ ಸಂಭ್ರಮಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಇವತ್ತಿಗೂ ಸಮಾನತೆ, ಗೌರವ, ಎಲ್ಲರನ್ನೂ ಒಳಗೊಳ್ಳುವ ಹಾಗೂ ಸಬಲೀಕರಣದ ಬದುಕನ್ನು ಬಯಸುವ ಜಗತ್ತಿನ ಎಲ್ಲರಿಗೂ ಗಾಂಧೀಜಿ ದಾರಿದೀಪವಾಗಿದ್ದಾರೆ. ಮಾನವತೆಗೆ ಅವರು ಬಿಟ್ಟು ಹೋದ ಸಂದೇಶಗಳಿಗೆ ಸರಿಸಾಟಿಯಾದುದು ಬೇರೆಡೆ ಸಿಗಲಾರದು.

ಗಾಂಧೀಜಿ ಅಕ್ಷರಶಃ ಭಾರತವನ್ನು ಚಿಂತನೆ ಮತ್ತು ಕೃತಿಯಲ್ಲಿ ಒಗ್ಗೂಡಿಸಿದರು. ಸರ್ದಾರ್ ಪಟೇಲ್ ಹೇಳಿದಂತೆ, ‘ಭಾರತ ವೈವಿಧ್ಯಗಳ ನೆಲ. ಇಂತಹ ವೈವಿಧ್ಯಗಳ ನಾಡು ಬೇರೊಂದಿಲ್ಲ. ಇಷ್ಟು ವೈವಿಧ್ಯಗಳ ಭೂಮಿಯಲ್ಲಿ ಪ್ರತಿಯೊಬ್ಬರನ್ನೂ ಒಂದೆಡೆ ತಂದ, ಜನರು ತಮ್ಮ ಭಿನ್ನಮತಗಳನ್ನು ಮೀರಿ ಒಗ್ಗಟ್ಟಿನಿಂದ ನಿಲ್ಲುವಂತೆ ಮಾಡಿದ, ವಸಾಹತೀಕರಣದ ವಿರುದ್ಧ ಹೋರಾಡಿ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಪ್ರಕಾಶಿಸುವಂತೆ ಮಾಡಿದ ಒಬ್ಬ ವ್ಯಕ್ತಿ ಯಾರಾದರೂ ಇದ್ದರೆ ಅವರು ಗಾಂಧೀಜಿ. ಇದನ್ನವರು ಭಾರತದಿಂದ ಶುರುಮಾಡಲಿಲ್ಲ, ಬದಲಿಗೆ ದಕ್ಷಿಣ ಆಫ್ರಿಕಾದಲ್ಲಿದ್ದುಕೊಂಡೇ ಆರಂಭಿಸಿದರು. ಭವಿಷ್ಯವನ್ನು ನೋಡುವ ಶಕ್ತಿ ಬಾಪೂಗಿತ್ತು. ಕೊನೆಯುಸಿರಿನತನಕವೂ ಅವರು ತಮ್ಮ ತತ್ವಗಳಿಗೆ ಬದ್ಧರಾಗಿದ್ದರು.’

ದೊಡ್ಡ ಮನುಷ್ಯನ ಸೂಕ್ಷ್ಮ ಚಿಂತನೆ
ಗಾಂಧೀಜಿಯವರ ಕಾಲದಲ್ಲಿ ಹೇಗೋ ಹಾಗೆಯೇ ೨೧ನೇ ಶತಮಾನದಲ್ಲೂ ಅವರ ಚಿಂತನೆಗಳು ಅತ್ಯಂತ ಪ್ರಸ್ತುತ. ಅವರ ಚಿಂತನೆಗಳಲ್ಲಿ ಜಗತ್ತಿನ ಹಲವಾರು ಸಮಸ್ಯೆಗಳಿಗೆ ಪರಿಹಾರವಿದೆ. ಭಯೋತ್ಪಾದನೆ ಹಾಗೂ ದ್ವೇಷದ ಮನಸ್ಥಿತಿಯಿಂದ ದೇಶ ಹಾಗೂ ಸಮಾಜಗಳು ಇಬ್ಭಾಗುತ್ತಿರುವ ಹೊತ್ತಿನಲ್ಲಿ ಗಾಂಧೀಜಿಯ ಶಾಂತಿ ಮತ್ತು ಅಹಿಂಸೆಯ ಮಂತ್ರಗಳಿಗೆ ಮಾನವ ಕುಲವನ್ನು ಒಗ್ಗೂಡಿಸುವ ಶಕ್ತಿಯಿದೆ. ಅಸಮಾನತೆ ಇನ್ನೂ ಸಾಕಷ್ಟಿರುವಾಗ ಗಾಂಧೀಜಿಯ ಸಮಾನತೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಚಿಂತನೆಗೆ ಲಕ್ಷಾಂತರ ಜನರ ಬದುಕನ್ನು ಮೇಲೆತ್ತುವ ಸಾಮರ್ಥ್ಯವಿದೆ.

ಹವಾಮಾನ ಬದಲಾವಣೆ ಹಾಗೂ ಮಾಲಿನ್ಯದ ಬಗ್ಗೆ ಎಲ್ಲರೂ ಆತಂಕಗೊಂಡಿರುವ ವೇಳೆಯಲ್ಲಿ ಗಾಂಧಿಜಿಯ ಯೋಚನೆಗಳತ್ತ ಜಗತ್ತು ಗಮನ ಹರಿಸಬಹುದು. 1909ರಲ್ಲೇ ಅವರು ಮನುಷ್ಯನ ಅಗತ್ಯ ಹಾಗೂ ದುರಾಸೆಯ ಕುರಿತು ಹೇಳಿದ್ದರು. ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವಾಗ ಸಂಯಮವಿರಲಿ ಎಂದಿದ್ದರು. ಅದನ್ನು ತಾವೇ ಮಾಡಿ ತೋರಿಸಿದರು. ತಾವೆಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಶೌಚಾಲಯಗಳನ್ನು ಸ್ವಚ್ಛಗೊಳಿಸಿದರು. ತಮ್ಮ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಛವಾಗಿರಿಸಿ ಮಾದರಿಯಾದರು. ನೀರಿನ ಮಿತಬಳಕೆಗೆ ಒತ್ತು ನೀಡಿದರು. ಅಹಮದಾಬಾದ್ ನಲ್ಲಿದ್ದಾಗ ಸಾಬರಮತಿ ನದಿಗೆ ತ್ಯಾಜ್ಯ ಸೇರಿಕೊಳ್ಳದಂತೆ ಹೋರಾಡಿದ್ದರು. 

ದಯವಿಟ್ಟು ಇದೊಂದು ಬರಹ ಓದಿ
ಗಾಂಧೀಜಿಯವರು ಬರೆದ ಪುಟ್ಟದೊಂದು ಬರಹ ಕೆಲ ಸಮಯದ ಹಿಂದೆ ನನ್ನ ಗಮನ ಸೆಳೆಯಿತು. 1941ರಲ್ಲಿ ಅವರಿದನ್ನು ಬರೆದಿದ್ದರು - ‘ರಚನಾತ್ಮಕ ಕಾರ್ಯಕ್ರಮ: ಇದರ ಅರ್ಥ ಮತ್ತು ಸ್ಥಳ’ ಎಂಬುದು ಅದರ ಶೀರ್ಷಿಕೆ. ಸ್ವಾತಂತ್ರ್ಯ ಹೋರಾಟದ ಗತಿ ಬದಲಾದಾಗ ಇದನ್ನು 1945ರಲ್ಲಿ ಅವರೇ ಪರಿಷ್ಕರಿಸಿದ್ದರು. ಈ ಬರಹದಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ ಸಬಲೀಕರಣ, ನೈರ್ಮಲ್ಯ ಸುಧಾರಣೆ, ಖಾದಿಗೆ ಪ್ರೋತ್ಸಾಹ, ಮಹಿಳಾ ಸಬಲೀಕರಣ, ಆರ್ಥಿಕ ಸಮಾನತೆಯಂತಹ ಹಲವಾರು ವಿಷಯಗಳ ಬಗ್ಗೆ ಬಾಪೂ ಮಾತನಾಡಿದ್ದರು. ದೇಶದ ಎಲ್ಲ ಜನರಿಗೂ ನನ್ನದೊಂದು ಮನವಿ. ದಯವಿಟ್ಟು ಗಾಂಧೀಜಿಯವರ ಈ ಲೇಖನವನ್ನು ಓದಿ. ಇದು ಆನ್‌ಲೈನ್‌ನಲ್ಲಿ ಸಿಗುತ್ತದೆ. ಇದನ್ನು ಬಾಪೂಜಿಯವರ ಕನಸಿನಂತೆ ದೇಶವನ್ನು ಕಟ್ಟಲು ರಚನಾತ್ಮಕವಾಗಿ ಬಳಸಿಕೊಳ್ಳಿ. ಈ ಲೇಖನದಲ್ಲಿರುವ ಹಲವಾರು ವಿಷಯಗಳು ಇಂದು ಬಹಳ ಪ್ರಸ್ತುತವಾಗಿವೆ. ಇವುಗಳನ್ನು ಮಾದರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ.

ಅವರ ಉತ್ಸಾಹ ನಮಗಿದೆಯೇ?
ಗಾಂಧೀಜಿಯವರ ಬದುಕಿನ ಅತ್ಯಂತ ಸುಂದರ ಸಂಗತಿಯೆಂದರೆ ಅವರು ಪ್ರತಿಯೊಬ್ಬ ಭಾರತೀಯನೂ ತಾನು ದೇಶದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಭಾವಿಸುವಂತೆ ಮಾಡಿದ್ದರು. ಶಿಕ್ಷಕ, ವಕೀಲ, ವೈದ್ಯ, ಕೃಷಿಕ, ಕಾರ್ಮಿಕ, ಉದ್ಯಮಿ ಹೀಗೆ ಪ್ರತಿಯೊಬ್ಬರಲ್ಲೂ ತಾವು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ಸಲ್ಲಿಸುತ್ತಿದ್ದೇವೆ ಎಂಬ ನಂಬಿಕೆಯನ್ನು ಬಿತ್ತಿದ್ದರು. ಈ ಆದರ್ಶವನ್ನು ನಾವು ಈಗಲೂ ಪಾಲಿಸುತ್ತ, ಪ್ರತಿಯೊಬ್ಬರೂ ದೇಶದ ನಿರ್ಮಾಣಕ್ಕೆ ಶ್ರಮಿಸುತ್ತಿದ್ದೇವೆ ಎಂದು ನಂಬೋಣ. ಆಹಾರವನ್ನು ವ್ಯರ್ಥ ಮಾಡದಿರುವುದು, ಅಹಿಂಸೆಯನ್ನು ಪಾಲಿಸುವುದು ಮುಂತಾದ ಅತ್ಯಂತ ಸಣ್ಣ ಸಂಗತಿಯಿಂದ ಇದನ್ನು ಪ್ರಾರಂಭಿಸಬಹುದು. ಭವಿಷ್ಯದ ತಲೆಮಾರಿಗೆ ಹಸಿರು ಹಾಗೂ ಸ್ವಚ್ಛ ಪರಿಸರವನ್ನು ಉಳಿಸುವುದಕ್ಕೆ ಸಂಕಲ್ಪಿಸೋಣ.

ಎಂಟು ದಶಕಗಳ ಹಿಂದೆ ಮಾಲಿನ್ಯದ ಆತಂಕ ಇಂದಿನಷ್ಟು ಇರಲಿಲ್ಲ. ಆದರೂ ಗಾಂಧೀಜಿ ಸೈಕಲ್ ತುಳಿಯುತ್ತಿದ್ದರು. ಅಹಮದಾಬಾದ್‌ನ ವಿದ್ಯಾಪೀಠದಿಂದ ಸಾಬರಮತಿ ಆಶ್ರಮಕ್ಕೆ ಅವರು ಸೈಕಲ್‌ನಲ್ಲಿ ಹೋಗುತ್ತಿದ್ದುದನ್ನು ಗುಜರಾತಿನ ಹಿರಿತಲೆಗಳು ನೆನಪಿಸಿಕೊಳ್ಳುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ನಡೆಸಿದ ಪ್ರತಿಭಟನೆಗಳಲ್ಲಿ ಜನರು ಸೈಕಲ್ ತುಳಿಯಬಾರದು ಎಂಬ ನಿಯಮದ ವಿರುದ್ಧ ನಡೆಸಿದ ಪ್ರತಿಭಟನೆಯೂ ಒಂದಾಗಿತ್ತು ಎಂದು ಓದಿದ್ದೇನೆ. ಶ್ರೀಮಂತ ವಕೀಲಿ ವೃತ್ತಿಯಿದ್ದರೂ ಗಾಂಧೀಜಿ ಜೋಹಾನ್ಸ್‌ಬರ್ಗ್‌ನಲ್ಲಿ ಸೈಕಲ್ ತುಳಿಯುತ್ತಿದ್ದರು. ಜೋಹಾನ್ಸ್‌ಬರ್ಗ್‌ಗೆ ಪ್ಲೇಗ್ ಮಾರಿ ದಾಳಿಯಿಟ್ಟಾಗ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಗಾಂಧೀಜಿ ಸ್ವಯಂ ಸೇವೆ ಮಾಡಿದ್ದರು. ಇಂತಹ ಉತ್ಸಾಹವನ್ನು ನಾವಿಂದು ತೋರಬಲ್ಲೆವೇ?

ಶಾಪಿಂಗ್ ಮಾಡುವಾಗ ನೆನಪಿಡಿ...
ಹಬ್ಬದ ಶ್ರಾಯ ಬರುತ್ತಿದೆ. ಇಡೀ ದೇಶ ಹೊಸ ಬಟ್ಟೆ, ಉಡುಗೊರೆ, ತಿಂಡಿ ತಿನಿಸುಗಳ ಶಾಪಿಂಗ್ ಮಾಡುತ್ತಿದೆ. ಖರೀದಿಗೆ ಹೋಗುವಾಗ ಬಾಪೂ ಮಾತನ್ನು ನೆನಪಿಟ್ಟುಕೊಳ್ಳಿ. ನಾವು ಮಾಡುವ ಶಾಪಿಂಗ್ ನಮ್ಮ ಸಹವರ್ತಿಗಳ ಬದುಕಿನಲ್ಲಿ ಬೆಳಕು ತರಲಿ. ಖಾದಿಯೇ ಇರಲಿ, ಗ್ರಾಮೀಣ ತಿನಿಸುಗಳೇ ಇರಲಿ, ಮಣ್ಣಿನ ದೀಪವೇ ಇರಲಿ, ನಾವು ಏನನ್ನು ಖರೀದಿಸುತ್ತೇವೋ ಅದರಿಂದ ಇನ್ನೊಬ್ಬರ ಬದುಕಿಗೆ ಆಸರೆ ಸಿಗಲಿ. ಇವುಗಳನ್ನು ಯಾರು ತಯಾರಿಸುತ್ತಾರೋ ಅವರನ್ನು
ನಾವು ಯಾವುತ್ತೂ ನೋಡಿಲ್ಲದೆ ಇರಬಹುದು, ಅಥವಾ ಮುಂದೆಯೂ ನೋಡದಿರಬಹುದು. ಆದರೆ, ಅವರಿಗೆ ನಾವು ಸಹಾಯ ಮಾಡುತ್ತಿದ್ದೇವೆ ಎಂದಾದರೆ ಗಾಂಧೀಜಿ ಖುಷಿಯಾಗುತ್ತಾರೆ.

ಸ್ವಚ್ಛ ಭಾರತದಿಂದ ಶ್ರದ್ಧಾಂಜಲಿ
ಕಳೆದ ನಾಲ್ಕು ವರ್ಷಗಳಲ್ಲಿ 130 ಕೋಟಿ ಭಾರತೀಯರು ಸ್ವಚ್ಛ ಭಾರತ ಆಂದೋಲನದ ಮೂಲಕ ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನ ಶ್ರಮದಿಂದಾಗಿ ಇಂದು ಸ್ವಚ್ಛ ಭಾರತ ಮಿಷನ್ ನಾಲ್ಕನೇ ವರ್ಷ ಪೂರೈಸುತ್ತಿದೆ. ಅದ್ಭುತ ಫಲಿತಾಂಶ ನೀಡಿದ ಅತ್ಯಂತ ಪ್ರಖರ ಆಂದೋಲನವಾಗಿ ಇದು ಹೊರಹೊಮ್ಮಿದೆ. ಇಂದು 8.5 ಕೋಟಿಗಿಂತ ಹೆಚ್ಚು ಕುಟುಂಬಗಳು ಮೊದಲ ಬಾರಿಗೆ ಶೌಚಾಲಯ ಬಳಸುತ್ತಿವೆ. 40 ಕೋಟಿಗೂ ಹೆಚ್ಚು ಭಾರತೀಯರು ಇನ್ನು ಬಯಲುಶೌಚಕ್ಕೆ ಹೋಗಬೇಕಿಲ್ಲ. ಕೇವಲ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ನೈರ್ಮಲ್ಯದ ಪ್ರಗತಿ ಶೇ.39ರಿಂದ ಶೇ.95ಕ್ಕೇರಿದೆ. 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ 4.5 ಲಕ್ಷ ಹಳ್ಳಿಗಳು ಇಂದು ಬಯಲುಶೌಚಮುಕ್ತ ಆಗಿವೆ.

ಸ್ವಚ್ಛ ಭಾರತ ಮಿಷನ್ ನಮ್ಮ ಗೌರವ ಹಾಗೂ ಉತ್ತಮ ಭವಿಷ್ಯಕ್ಕೆ ಸಂಬಂಧಿಸಿದ್ದು. ಪ್ರಕೃತಿಯ ಕರೆಗೆ ಹೋಗುವಾಗ ಪ್ರತಿದಿನ ಬೆಳಿಗ್ಗೆ ತಮ್ಮ ಮುಖ ಮುಚ್ಚಿಕೊಳ್ಳುವ ಕಷ್ಟದಿಂದ ಇದು ಮಹಿಳೆಯರಿಗೆ ಮುಕ್ತಿ ನೀಡಿದೆ. ನೈರ್ಮಲ್ಯದ ಕೊರತೆಯಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯದಿಂದ ನಮ್ಮ ಮಕ್ಕಳನ್ನು ಇದು ಕಾಪಾಡುತ್ತಿದೆ. ಕೆಲ ದಿನಗಳ ಹಿಂದೆ ಮನ್ ಕಿ ಬಾತ್‌ಗೆ ರಾಜಸ್ಥಾನದಿಂದ ಒಬ್ಬ ಅಂಗವಿಕಲ ಕರೆ ಮಾಡಿದ್ದ. ಅವನಿಗೆ ಎರಡೂ ಕಣ್ಣಿಲ್ಲ. ತನ್ನ ಮನೆಗೊಂದು ಟಾಯ್ಲೆಟ್ ಬಂದಿದ್ದರಿಂದ ಬದುಕಿನಲ್ಲಾದ ಬದಲಾವಣೆಯನ್ನು ಆತ ಖುಷಿಯಿಂದ ಹೇಳಿಕೊಂಡಿದ್ದ. ಅವನಂತಹ ಅನೇಕ ಅಂಗವಿಕಲ ಸೋದರ ಸೋದರಿಯರಿಗೆ ಶೌಚಾಲಯಕ್ಕೆ ದೂರ ಹೋಗುವ ಸಂಕಷ್ಟವನ್ನು ಸ್ವಚ್ಛ ಭಾರತ ಆಂದೋಲನ ತಪ್ಪಿಸಿದೆ. ಆತ ನನಗೆ ಮಾಡಿದ ಆಶೀರ್ವಾದವನ್ನು ಯಾವತ್ತೂ ಮರೆಯಲಾರೆ.

ದೇಶಕ್ಕಾಗಿ ನಾವೂ ಪುಣ್ಯಾತ್ಮರಾಗೋಣ!
ಇಂದು ಬದುಕಿರುವ ನಮ್ಮಲ್ಲಿ ಬಹುತೇಕ ಮಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವ ಪುಣ್ಯ ದೊರೆತಿಲ್ಲ. ದೇಶಕ್ಕಾಗಿ ನಾವು ಪ್ರಾಣ ಬಿಡಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವೀಗ ದೇಶಕ್ಕಾಗಿ ಬದುಕಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಸಮೃದ್ಧ ಭಾರತದ ಕನಸು ನನಸು ಮಾಡಲು ನಮ್ಮ ಕೈಲಾದ್ದನ್ನು ಮಾಡೋಣ. ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸುವ ಅದ್ಭುತ ಅವಕಾಶ ನಮ್ಮ ಮುಂದಿದೆ. ಬಾಪೂಜಿಯವರ ಅತ್ಯಂತ ಪ್ರಿಯವಾದ ಭಜನೆಯಲ್ಲಿ‘ವೈಷ್ಣವಜನತೋತೇನೇಕಹಿಯೇ ಪೀರಪರಾಯೀಜಾನೇರೇ’ ಕೂಡ ಒಂದು. ಅಂದರೆ, ಬೇರೆಯವರ ನೋವನ್ನು ಸ್ವತಃ ಅನುಭವಿಸಲು ಯಾರಿಗೆ ಸಾಧ್ಯವೋ ಅವನೇ ಪುಣ್ಯಾತ್ಮ. ಈ ಸ್ಫೂರ್ತಿಯೇ ಗಾಂಧೀಜಿಯವರಿಗೆ ಬೇರೆಯವರಿಗಾಗಿ ಬದುಕಲು ಚೈತನ್ಯ ನೀಡಿತ್ತು. ಇಂದು 130 ಕೋಟಿ ಭಾರತೀಯರು ಈ ಸ್ಫೂರ್ತಿಯಿಂದ ಬದುಕಲು ಸಂಕಲ್ಪ ಮಾಡೋಣ.

MK Gandhi 150 Yrs India United To Make Gandhijis Dream Come True PM Modi

- ನರೇಂದ್ರ ಮೋದಿ, ಪ್ರಧಾನಿ

Follow Us:
Download App:
  • android
  • ios