ಐಜಾಲ್‌[ಮೇ.29]: ಮಿಜೋರಾಂರಲ್ಲಿ ಮಂಗಳವಾರದಿಂದಲೇ ಜಾರಿಗೆ ಬರುವಂತೆ ಮದ್ಯಪಾನ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ.

ಈ ಕುರಿತು ರಾಜ್ಯ ಸರ್ಕಾರ ಕಳೆದ ಮಾಚ್‌ರ್‍ನಲ್ಲೇ ನಿರ್ಧಾರ ಕೈಗೊಂಡು, ಮಸೂದೆಯನ್ನು ರಾಜ್ಯಪಾಲರ ಸಹಿಗೆ ಕಳುಹಿಸಿಕೊಟ್ಟಿತ್ತು. ಆದರೆ ಅಷ್ಟರಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಕಳೆದ ಭಾನುವಾರವಷ್ಟೇ ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಜಾರಿಗೊಳಿಸಿದ್ದ ಚುನಾವಣಾ ನೀತಿ ಸಂಹಿತೆಯನ್ನು ಹಿಂದಕ್ಕೆ ಪಡೆದಿತ್ತು. ಅದರ ಬೆನ್ನಲ್ಲೇ ರಾಜ್ಯಪಾಲರು ಸಹಿ ಹಾಕಿಕಳುಹಿಸಿದ್ದ ಮಸೂದೆ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಜಾರಿಗೊಳಿಸಿದೆ.

ಸರ್ಕಾರದ ಈ ನಿರ್ಧಾರದಿಂದ ರಾಜ್ಯವು ವಾರ್ಷಿಕ 60-70 ಕೋಟಿ ರು. ಆದಾಯ ಕಳೆದುಕೊಳ್ಳಲಿದೆ. ಆದರೆ ಮದ್ಯಪಾನದಿಂದ ಆಗುವ ನಷ್ಟಕ್ಕೆ ಹೋಲಿಸಿದರೆ ಈ ನಷ್ಟಭಾರೀ ಕಡಿಮೆ ಎಂದು ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಹೊಸ ಕಾಯ್ದೆಯ ಅನ್ವಯ ಸೇನಾ ಸಿಬ್ಬಂದಿ, ವಿವಿಧ ರೀತಿಯ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಪ್ರವಾಸಿಗರಿಗೆ ಕೆಲವೊಂದು ವಿನಾಯಿತಿ ನೀಡಲಾಗಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 43 ಮದ್ಯ ಮಾರಾಟ ಅಂಗಡಿಗಳು, 2 ಬಾರ್‌, ಒಂದು ಮೈಕ್ರೂ ಬ್ರಿವೇರಿ ಇದೆ. ಈ ಮೊದಲು ಕೂಡಾ 18 ವರ್ಷ ರಾಜ್ಯದಲ್ಲಿ ಮದ್ಯಪಾನ ನಿಷೇಧ ಇತ್ತು. ಆದರೆ 2015ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಸರ್ಕಾರ ನಿಷೇಧ ತೆಗೆದು ಹಾಕಿತ್ತು. ಅಂದಹಾಗೆ ಮಿಜೋರಾಂನ ಜನಸಂಖ್ಯೆ 10 ಲಕ್ಷ.