ಭೋಪಾಲ್(ಜೂ.15): ಲೋಕಸಭೆ ಚುನಾವಣೆಯಲ್ಲಿ ಭೋಪಾಲ್ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗೆ ಹೋಮ, ಹವನ ನಡೆಸಿದ್ದ ಸ್ವಯಂಗೊಷಿತ ದೇವಮಾನವ ವೈರಾಗ್ಯಾನಂದ ಸ್ವಾಮೀಜಿ ಅಲಿಯಾಸ್ ಮಿರ್ಚಿ ಬಾಬಾ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಚುನಾವಣೆಯಲ್ಲಿ ದಿಗ್ವಿಜಯ ಸಿಂಗ್ ಸೋತರೆ ತಾನು ಜಲಸಮಾಧಿಯಾಗುವ ಮೂಲಕ  ಆತ್ಮಾಹುತಿ ಮಾಡಿಕೊಳ್ಳುವುದಾಗಿ ಮಿರ್ಚಿ ಬಾಬಾ ಹೇಳಿದ್ದರು. ಅದರಂತೆ ದಿಗ್ವಿಜಯ್ ಸೋತಿದ್ದು ತಮಗೆ ಜಲಸಮಾಧಿಯಾಗಲು ಅನುಮತಿ ನೀಡಿ ಎಂದು ಭೋಪಾಲ್ ಜಿಲ್ಲಾಧಿಕಾರಿಗಳಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದೇ ಜೂ.16ರ ಮಧ್ಯಾಹ್ನ 2.11ರ ಸಮಯಕ್ಕೆ ತಾವು ಜಲಸ ಸಮಾಧಿಯಾಗಲಿದ್ದು, ಜಲ ಸಮಾಧಿಯಾಗಲು ಸ್ಥಳ ಗುರುತಿಸಿ ಕೊಡುವಂತೆ ಮಿರ್ಚಿ ಬಾಬಾ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ದಿಗ್ವಿಜಯ್ ಸೋಲಿನ ಬಳಿಕ ಸಾಮಾಜಿಕ ತಾಣಗಳಲ್ಲಿ ಸ್ವಾಮೀಜಿ ಹಾಗೂ ಅವರ ಯಾಗದ ಕುರುತು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೇ ಬಾಬಾ ಯಾವಾಗ ಜಲ ಸಮಾಧಿಯಾಗಲಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದರು.

ಇನ್ನು ಸ್ವಾಮೀಜಿ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ತರುಣ್ ಪಿಥೊಡೆ, ಈ ಕುರಿತು ಪೋಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಜಲ ಸಮಾಧಿಯಾಗಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.