ಒಂದೇ ರಾತ್ರಿಯಲ್ಲಿ ಮಾಯವಾದ ಮಳೆ : ಭಾರತಿ ತೀರ್ಥ ಶ್ರೀಗಳ ಯಾಗದ ಫಲವೇ !
- ಒಂದೇ ರಾತ್ರಿಯಲ್ಲಿ ತಣ್ಣಗಾದ ಮಳೆ
- ಶ್ರೀಗಳ ಪವಾಡ ಎಂದ ಜನತೆ
ಶೃಂಗೇರಿ[ಜೂ.16]: ಶೃಂಗೇರಿಯಲ್ಲಿ ಒಂದೇ ರಾತ್ರಿಯಲ್ಲಿ ಪವಾಡ ನಡೆದಿದೆ.ಅದ್ಭುತ ಮಹಾಪುರುಷರೊಬ್ಬರ ಯಾಗದ ಫಲದಿಂದ ದೊಡ್ಡ ತೊಂದರೆ ನಿವಾರಣೆಯಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ವರುಣನ ಅಬ್ಬರಕ್ಕೆ ಇಡೀ ಶೃಂಗೇರಿಯೇ ಮುಳುಗುವ ಸ್ಥಿತಿಗೆ ಬಂದಿತ್ತು. ತುಂಗೆಯ ತಟದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ಆದರೆ ರಾತ್ರೋರಾತ್ರಿ ವರುಣನ ಅಬ್ಬರ ಸಂಪೂರ್ಣ ತಣ್ಣಗಾಗಿದೆ.
ಭಾರತೀ ತೀರ್ಥ ಶ್ರೀಗಳ ವಿಶೇಷ ಯಾಗದ ಫಲದಿಂದ ಈ ಪವಾಡ ಸಂಭವಿಸಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಮಳೆ ಕಡಿಮೆಯಾಗಲು ಜಗದ್ಗುರುಗಳು ವಿಶೇಷ ಯಾಗವನ್ನು ಕೈಗೊಂಡಿದ್ದರು. ಪೂಜೆಯಫಲದಿಂದ ಬಹುದೊಡ್ಡ ಗಂಡಾಂತರ ನಿವಾರಣೆಯಾಗಿದೆ ಎಂಬುದು ಶ್ರೀಕ್ಷೇತ್ರದ ಭಕ್ತರ ನಂಬಿಕೆಯಾಗಿದೆ.
ಮಳೆಗೆ ಹಲವು ಕಡೆ ತೊಂದರೆ
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿದ ಮಹಾಮಳೆಗೆ ರಸ್ತೆ-ಹಳ್ಳ-ಕೊಳ್ಳಗಳು ಕೊಚ್ಚಿ ಹೋಗಿ, ಗುಡ್ಡಗಳು ಕುಸಿದು ಬಿದ್ದಿವೆ. ಭದ್ರಾ ನದಿಯ ನೀರಿನ ರಭಸಕ್ಕೆ ಹೊರನಾಡು ಅನ್ನಪೂಣೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಶಿಥಿಲಾವಸ್ಥೆ ತಲುಪಿದೆ. ನೀರಿನ ರಭಸಕ್ಕೆ ಸೇತುವೆಯ ಇಕ್ಕೆಲಗಳಲ್ಲಿದ್ದ ತಡೆಗೋಡೆಯ ಕಂಬಗಳು ಕೂಡ ಮುರಿದು ಬಿದ್ದು, ಸೇತುವೆಯೂ ಪಾಳು ಬಿಟ್ಟು ಹೋಗಿವೆ.