ಮಧ್ಯಾಹ್ನ 12:20 ಕ್ಕೆ ತಾವು ಮಂತ್ರಿಯಾಗುವುದನ್ನು ಖಾತ್ರಿ ಮಾಡಿಕೊಂಡ ಪ್ರಹ್ಲಾದ್‌ ಜೋಶಿ ಹಾಗೂ ಸುರೇಶ್‌ ಅಂಗಡಿ ಹೆಂಡತಿ ಮಕ್ಕಳನ್ನು ಊರಿಂದ ಕರೆಸಲು ಒದ್ದಾಡುತ್ತಿದ್ದರೆ, ಸದಾನಂದಗೌಡರು ಹೆಂಡತಿ, ಮಗ, ಸೊಸೆ, ಮೊಮ್ಮಗಳನ್ನು ಕರೆದುಕೊಂಡು ಎರಡು ದಿನ ಮೊದಲೇ ದಿಲ್ಲಿಗೆ ಬಂದಿದ್ದರು.

ಜೋಶಿ ಪತ್ನಿ, ಮಗಳು ಸಂಜೆಗೆ ಬಂದರಾದರೂ ಪಾಸ್‌ ಸಮಸ್ಯೆಯಿಂದ ಒಳಗೆ ಹೋಗದೇ ಮನೆಯಲ್ಲೆಯೇ ಕುಳಿತು ಪ್ರಮಾಣ ವಚನ ನೋಡಿದರು. ಇನ್ನು ಸುರೇಶ್‌ ಅಂಗಡಿ ಕುಟುಂಬ ಬಂದಿದ್ದು ರಾತ್ರಿ. ಸದಾನಂದಗೌಡರ ಕುಟುಂಬಕ್ಕೆ ಪಾಸ್‌ ಇತ್ತಾದರೂ ಅದನ್ನು ಕಾರ್ಯಕರ್ತರಿಗೆ ಕೊಟ್ಟು ದೊಡ್ಡ ಸ್ಕ್ರೀನ್‌ ಹಾಕಿ ಮನೆಯಲ್ಲೇ ಟೀವಿಯಲ್ಲಿ ಪ್ರಮಾಣ ವಚನ ನೋಡಿದರು.

ಅಂದ ಹಾಗೆ ಸದಾನಂದ ಗೌಡರು ಆವತ್ತು ತಮ್ಮ ಮನೆಯಲ್ಲಿ ಕರ್ನಾಟಕದಿಂದ ಬಂದವರಿಗೆ ನೀರು ದೋಸೆ, ಚಿಕನ್‌ ಕರಿ ಊಟದ ವ್ಯವಸ್ಥೆ ಮಾಡಿಸಿದ್ದರು. ರಾತ್ರಿ 12ರವರೆಗೆ ಅವರ ಮನೆಯಲ್ಲಿ ಜನವೋ ಜನ.

ಜೋಶಿಗೊಂದು ಭರ್ಜರಿ ಅವಕಾಶ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ರಾಜಕೀಯವಾಗಿ ಸ್ವಲ್ಪ ಹಿಂದೆ ಇದ್ದ ಪ್ರಹ್ಲಾದ್‌ ಜೋಶಿ ಒಮ್ಮೆಲೇ ಮೊದಲ ಬಾರಿಗೇ ಸಂಸದೀಯ ವ್ಯವಹಾರ ಖಾತೆ ಪಡೆದು ದಿಲ್ಲಿಯಲ್ಲಿ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ.

ಇನ್ನು ಮುಂದೆ ಜೋಶಿ ಲೋಕಸಭೆಯಲ್ಲಿ ಕುಳಿತುಕೊಳ್ಳುವುದು ಮೋದಿ ಸಾಹೇಬರ ಹಿಂದಿನ ಬೆಂಚ್‌ನಲ್ಲಿ. ಅಷ್ಟೇ ಅಲ್ಲ, ಅಧಿವೇಶನ ನಡೆದಾಗ ದಿನವೂ ಬೆಳಿಗ್ಗೆ ಒಮ್ಮೆ, ಸಂಜೆ ಒಮ್ಮೆ ಪ್ರಧಾನಿಗೆ ಒಬ್ಬರೇ 15ರಿಂದ 20 ನಿಮಿಷ ಬ್ರಿಫಿಂಗ್‌ ಕೊಡುವ ಅವಕಾಶ ಸಿಗುತ್ತದೆ.

ಅಷ್ಟೇ ಅಲ್ಲ, ಮೋದಿ ಸಂಪುಟದ ಎಲ್ಲ ಮಂತ್ರಿಗಳ ಸಖ್ಯವೂ ಜಾಸ್ತಿ ಆಗುತ್ತದೆ. ಸಂಸದೀಯ ವ್ಯವಹಾರದ ಪೊಲಿಟಿಕಲ್ ಕೆಲಸದ ಜೊತೆಜೊತೆಗೆ ಕರ್ನಾಟಕದಿಂದ ಬರುವ ನಿಯೋಗಗಳನ್ನು ಜೋಶಿ ಸರಿಯಾಗಿ ನಿಭಾಯಿಸಿದರೆ ಮಾತ್ರ ಮೋದಿ ಕೊಟ್ಟಿರುವ ಸ್ಥಾನದ ಜೊತೆಗೆ ದಿಲ್ಲಿಯಲ್ಲಿ ತೂಕವೂ ಹೆಚ್ಚುತ್ತದೆ.

ದಾಸೋಹ ಕೇಂದ್ರಗಳು ಬಂದ್‌!

ಕಳೆದ 2 ದಶಕಗಳಿಂದ ಕರ್ನಾಟಕದಿಂದ ಯಾರೇ ಬರಲಿ ಕೆ ಎಚ್‌ ಮುನಿಯಪ್ಪನವರ ಮನೆ ಮತ್ತು ಅನಂತಕುಮಾರ್‌ ಮನೆಯಲ್ಲಿ ದಾಸೋಹದ ರೀತಿಯಲ್ಲಿ ಊಟ-ತಿಂಡಿ ಸಿಗುತ್ತಿತ್ತು. ಮುನಿಯಪ್ಪ ಮನೇಲಿ ಮುದ್ದೆ, ಉಪ್ಪು ಸಾರು, ಸ್ವಲ್ಪ ಮೊಸರು, ಉಪ್ಪಿನಕಾಯಿ.

ಅನಂತಕುಮಾರ್‌ ಮನೆಯಲ್ಲಿ ಬೆಂಗಳೂರಿನ ಊಟ. ಆದರೆ ಈಗ ಅನಂತ್‌ ತೀರಿಕೊಂಡು, ಮುನಿಯಪ್ಪ ಸೋತು ದೂರದ ಕರುನಾಡಿನಿಂದ ಬರುವ ಪ್ರಭಾವ ಇಲ್ಲದ ಸಾಮಾನ್ಯರಿಗೆ ತೊಂದರೆ ಆಗೋದು ನಿಜ. ಆದರೆ ತುಮಕೂರಿನ ಬಸವರಾಜ್‌ ಗೆದ್ದಿರುವುದರಿಂದ ಸ್ವಲ್ಪ ಸಮಾಧಾನ.

ಬಸವರಾಜ್‌ ಕರ್ನಾಟಕದಿಂದ ಯಾರೇ ಬಂದರೂ 30 ಜನರಿಗೆ ಊಟ-ನಿದ್ದೆ ವ್ಯವಸ್ಥೆ ಮಾಡುತ್ತಾರೆ. ಆದರೆ ಕೋಟಿ ಕೋಟಿ ಖರ್ಚು ಮಾಡಿ ದಿಲ್ಲಿಗೆ ಬರುವ ಕೆಲ ಸಂಸದರ ಮನೆಯಲ್ಲಿ ಊಟ ಬಿಡಿ, ನೀರು ಕೇಳುವವರೂ ಇರುವುದಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ