ಹಾವೇರಿ[ಜು.07]  :  ರಾಜ್ಯ ಮೈತ್ರಿ ಕೂಟದಲ್ಲಿ 14 ಶಾಸಕರು ರಾಜೀನಾಮೆ ನೀಡಿದ್ದು,  ಈ ವಿಚಾರ ಸಚಿವ ಜಮೀರ್ ಅಹಮದ್ ಅವರಿಗೆ ಮೊದಲೇ ತಿಳಿದಿತ್ತೇ ಎನ್ನುವ  ಶಂಕೆ ವ್ಯಕ್ತವಾಗಿದೆ. 

ಜುಲೈ 3 ರಂದು ಹಾವೇರಿ ಶಿಶುನಾಳದಲ್ಲಿ ಜಮೀರ್ ನೀಡಿದ್ದ ಹೇಳಿಕೆಯೊಂದು ಅನುಮಾನ ವ್ಯಕ್ತವಾಗುವಂತೆ ಮಾಡಿದೆ.  ಬಿಜೆಪಿ ನಾಯಕ ಬಸವರಾಜ್ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದ ಜಮೀರ್, ಅಧಿಕಾರ ಬರುತ್ತೆ, ಹೋಗುತ್ತೆ. ಇವತ್ತು ನಾನು ಸಚಿವನಾಗಿದ್ದೇನೆ ನಾಳೆ ಬೊಮ್ಮಾಯಿ ಸಚಿವರಾಗುತ್ತಾರೆ ಎಂದಿದ್ದರು. ಈ ನಿಟ್ಟಿನಲ್ಲಿ ಮೈತ್ರಿ ಸರ್ಕಾರ ಪತನವಾಗುವ ಬಗ್ಗೆ ಅಂದೇ ಮುನ್ಸೂಚನೆ ನೀಡಿದ್ದರಾ ಎನ್ನುವ ಅನುಮಾನ ವ್ಯಕ್ತವಾಗಿದೆ.

ಅಲ್ಲದೇ ಅಂದಿನ ಕಾರ್ಯಕ್ರಮದಲ್ಲಿ, ಬೊಮ್ಮಾಯಿ ನನಗೆ ಅಣ್ಣನ ಹಾಗೆ ಎಂದಿದ್ದ  ಜಮೀರ್, ಶಿಗ್ಗಾಂವಿ, ಸವಣೂರಲ್ಲಿ ಬೊಮ್ಮಾಯಿ ಉತ್ತಮ ಕೆಲಸ ಮಾಡಿದ್ದಾರೆ. ಬೊಮ್ಮಾಯಿ ಜೊತೆ ನಾನು ಯಾವಾಗಲೂ ಇರುತ್ತೇನೆ ಎಂದಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಪತನದ ಹಿಂದೆ ಜಮೀರ್ ಕೈವಾಡ ಇದೆಯೇ ಎನ್ನುವ ಅನುಮಾನಕ್ಕೆ ಕಾರಣವಾಗಿದೆ. 

ಅಲ್ಲದೇ ಶಿಶುನಾಳ ಶರೀಫದ ಬಂಗಾರದ ಹಬ್ಬದಲ್ಲಿ ಪಾಲ್ಗೊಂಡಿದ್ದ ಜಮೀರ್  ವೈಯಕ್ತಿಕವಾಗಿಯೇ ಕ್ಷೇತ್ರದ ಅಭಿವೃದ್ಧಿಗಾಗಿ 10 ಲಕ್ಷ ರು. ನೀಡುವುದಾಗಿ ಘೋಷಿಸಿದ್ದರು.  ಅಂದಿನ ಕಾರ್ಯಕ್ರಮದಲ್ಲಿ ಜಮೀರ್ ಅಹಮದ್ ನೀಡಿದ್ದ ಹೇಳಿಕೆಗೂ ಇಂದಿನ ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗೂ ಹೊಂದಾಣಿಕೆಯಾಗುತ್ತಿದ್ದು ಅನುಮಾನಕ್ಕೆ ಕಾರಣವಾಗಿದೆ.