* 500 ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಕ್ಯಾಂಟೀನ್ ಆರಂಭ* ವಿದ್ಯಾರ್ಥಿನಿಯ ಮನವಿಗೆ ಸ್ಪಂದಿಸಿ ಸ್ಥಳದಲ್ಲೇ ಸಚಿವ ತನ್ವೀರ್ ಸೇಠ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ 500ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳಿರುವ ಪದವಿಪೂರ್ವ ಕಾಲೇಜುಗಳಲ್ಲಿ ಇಂದಿರಾ ಕ್ಯಾಂಟೀನ್ ಮಾದರಿ ಕ್ಯಾಂಟೀನ್ ತೆರೆಯಲು ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯುನಿಸೆಫ್ ಸಹಯೋಗದಲ್ಲಿ ಶುಕ್ರವಾರ ವಿಕಾಸ ಸೌಧದಲ್ಲಿ ಏರ್ಪಡಿಸಿದ್ದ ಶಾಲಾ ಮಕ್ಕಳೊಂದಿಗಿನ ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬರ ಮನವಿಗೆ ಸ್ಪಂದಿಸಿದ ಸಚಿವರು ಈ ಘೋಷಣೆ ಮಾಡಿದರು.

ಹೊಸಕೋಟೆ ಸರ್ಕಾರಿ ಶಾಲೆಯ ನಂದಿನಿ ಮಾತನಾಡಿ, ನಮ್ಮ ಶಾಲೆಗೆ ನಿತ್ಯ 500ಕ್ಕೂ ಹೆಚ್ಚು ಮಂದಿ ಪಿಯು ವಿದ್ಯಾರ್ಥಿಗಳು ವಿವಿಧ ಹಳ್ಳಿ ಗಳಿಂದ ಬೆಳ್ಳಂಬೆಳಗ್ಗೆ ತಿಂಡಿ ಮಾಡದೆ ಬರುತ್ತಾರೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತೀರಿ. ಕಾಲೇಜು ವಿದ್ಯಾರ್ಥಿಗಳು ಮಾತ್ರ ಹಸಿವಿನಿಂದ ಸಮಸ್ಯೆ ಎದುರಿಸುವಂತಾಗಿದೆ. ಕಾಲೇಜು ಬಳಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ನಮ್ಮ ಕಾಲೇಜಿಗಾಗಿಯೂ ಪ್ರತ್ಯೇಕವಾಗಿ ಇಂದಿರಾ ಕ್ಯಾಂಟೀನ್ ಮಾಡಿಕೊಡಿ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುತ್ತಿದೆ ಎಂಬ ಕಾರಣಕ್ಕೆ ನಮ್ಮ ಕಾಲೇಜಿಗೂ ಕ್ಯಾಂಟೀನ್ ಕೊಡಿ ಎಂದು ಕೇಳುತ್ತಿದ್ದೀರಿ. ಈ ಮೊದಲು ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು. ಈ ವೇಳೆ ವಿದ್ಯಾರ್ಥಿನಿ ಹಸಿವಿನಿಂದಲೇ ಸಮಸ್ಯೆ ಎದುರಿಸಿ ಹಲವು ಹೆಣ್ಣು ಮಕ್ಕಳು ತಲೆತಿರುಗಿದಂತಾಗಿ ಬೀಳುತ್ತಿದ್ದರು ಎಂದು ಹೇಳಿದರು. ಹೀಗಾಗಿ ಸಮಸ್ಯೆಯ ಗಂಭೀರತೆ ಅರಿತ ಸಚಿವರು, ರಾಜ್ಯದಲ್ಲಿ 500ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿರುವ ಪಿಯು ಕಾಲೇಜುಗಳಲ್ಲಿ ಕ್ಯಾಂಟೀನ್ ಮಾಡಲಾಗುವುದು. ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ.

ಎಲ್ಲಾ ಶಾಲೆಗಳಲ್ಲೂ ಪುಸ್ತಕ ಕೋಶ: ಸಂವಾದದ ವೇಳೆ ಮಕ್ಕಳು ಶಾಲೆಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಇಲ್ಲದ ಕಾರಣ ಪಠ್ಯಪುಸ್ತಕದ ಹೊರತಾಗಿ ಬೇರೆ ಪುಸ್ತಕಗಳು ಲಭ್ಯವಾಗುವುದಿಲ್ಲ ಎಂದು ಅಳಲು ತೋಡಿ ಕೊಂಡರು. ಈ ವೇಳೆ ಮಾತನಾಡಿದ ಸಚಿವ ತನ್ವೀರ್ ಸೇಠ್, ಎಲ್ಲಾ ಶಾಲೆಗಳಿಗೂ ಗ್ರಂಥಾಲಯ ವ್ಯವಸ್ಥೆ ಮಾಡಲು ಹಣಕಾಸಿನ ಲಭ್ಯತೆ ಇರುವುದಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಶಾಲೆಗಳಲ್ಲೂ ಪುಸ್ತಕ ಕೋಶ ಮಾಡಲಾಗುವುದು ಎಂದರು.

ಶಾಲೆಗಳಲ್ಲಿಯೇ ಕೆಎಸ್‌ಆರ್‌'ಟಿಸಿ ಪಾಸು ವಿತರಣೆ: ಪ್ರಸ್ತುತ ಕೆಎಸ್‌ಆರ್‌ಟಿಸಿ ಪಡೆಯಲು ವಿದ್ಯಾರ್ಥಿಗಳು ಬಸ್ಸು ನಿಲ್ದಾಣಗಳಲ್ಲಿ ನಿಲ್ಲುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗದಂತೆ ಮುಂದಿನ ವರ್ಷದಿಂದ ಶಾಲೆಯಿಂದಲೇ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್ಸು ಪಾಸು ವಿತರಣೆ ಮಾಡಲಾಗುವುದು. ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮುದ್ರಿತ ಪಠ್ಯಪುಸ್ತ ಕ ರದ್ದು, ಆನ್‌ಲೈನ್ ಪುಸ್ತಕ?
ಮುಂದಿನ ದಿನಗಳಲ್ಲಿ ಪಠ್ಯಪುಸ್ತಕಗಳ ಬದಲಿಗೆ ಹಂತ ಹಂತವಾಗಿ ಅಂತರ್ಜಾಲದ ಮೂಲಕ ಪಠ್ಯಪುಸ್ತಕ ನೀಡಲು ಚಿಂತನೆ ನಡೆಸಿದ್ದೇವೆ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. ಪ್ರತಿ ವರ್ಷ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಲು ಹೆಚ್ಚು ವೆಚ್ಚ ಉಂಟಾಗುತ್ತಿದೆ. ಪಠ್ಯಪುಸ್ತಕಗಳಿಗಾಗಿ ಸಾಕಷ್ಟು ಪರಿಸರ ಹಾನಿಯೂ ಉಂಟಾಗುತ್ತದೆ. ಹೀಗಾಗಿ ಮೊದಲ ಹಂತದಲ್ಲಿ ಕಡಿಮೆ ಪ್ರಮಾಣದಲ್ಲಿ ಅಂತರ್ಜಾಲದ ಮೂಲಕ ಪಠ್ಯಪುಸ್ತಕ ನೀಡಲಾಗುವುದು ಎಂದರು. ನಾನು ಸಚಿವನಾದ ಬಳಿಕ ಸರ್ಕಾರಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೂ ಶಿಕ್ಷಕನನ್ನು ನೀಡುತ್ತೇವೆ, ಶಾಲೆ ಮುಚ್ಚಲ್ಲ ಎಂದು ಘೋಷಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪ್ರಶ್ನೆಗಳ ಬಾಣಕ್ಕೆ ಸಚಿವರು ಕಕ್ಕಾ ಬಿಕ್ಕಿ:
ಚಿತ್ರದುರ್ಗದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸಿಂಧು, ವಿದ್ಯಾರ್ಥಿಗಳಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಎಸ್‌'ಸಿ, ಎಸ್‌'ಟಿ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಉಳಿದ ವಿದ್ಯಾರ್ಥಿಗಳು ವಿದ್ಯಾರ್ಥಿಗಳಲ್ಲವೇ? ಎಂದು ಪ್ರಶ್ನಿಸಿದರು. ಈ ವೇಳೆ ಸಚಿವ ತನ್ವೀರ್ ಸೇಠ್, ಸಂವಿಧಾನದಲ್ಲಿಯೇ ಮೀಸಲಾತಿ ಬಗ್ಗೆ ಪ್ರಸ್ತಾಪವಿದೆ. ಇದನ್ನು ಏಕಾಏಕಿ ಬದಲು ಮಾಡಲು ಬರುವುದಿಲ್ಲ ಎಂದಷ್ಟೇ ಹೇಳಿದರು. ಮತ್ತೊಬ್ಬ ಖಾಸಗಿ ಶಾಲೆ ವಿದ್ಯಾರ್ಥಿನಿ ಮಾತನಾಡಿ, ಶಿಕ್ಷಣದ ಹಕ್ಕು ಎಲ್ಲಾ ಮಕ್ಕಳಿಗೂ ಇದ್ದ ರೀತಿಯಲ್ಲೇ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಹಕ್ಕು ಕೂಡ ಇರುತ್ತದೆ. ನಾವು ಏನು ಪಾಪ ಮಾಡಿದ್ದೇವೆ, ಶುಲ್ಕ ಕಟ್ಟಿ ಓದುವುದು ತಪ್ಪಾ ಸರ್? ಎಂದಳು.

ಕನ್ನಡಪ್ರಭ ವಾರ್ತೆ
epaperkannadaprabha.com