ಕೋಲಾರ (ಜೂ.15): ಜೆಡಿಎಸ್‌ನಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದವರಿಗೆ ಅವಕಾಶ ಮಾಡಿಕೊಡಲು ಪಕ್ಷದ ಇಬ್ಬರು ಸಚಿವರಿಂದ ರಾಜೀನಾಮೆ ಕೊಡಿಸಲಾಗುವುದು, ಹೊಸಬರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗುವುದು ಎನ್ನುವ ಸುಳಿವನ್ನು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ನಲ್ಲಿ ಇಬ್ಬರು ಸಚಿವರಿಗೆ ರಾಜೀನಾಮೆ ಕೊಡಿಸಿ ಎಲ್ಲಾ ಸಮುದಾಯಗಳಿಗೂ ಅವಕಾಶ ಒದಗಿಸಲು ಚಿಂತನೆ ನಡೆದಿದೆ. ಮುಂದಿನ ದಿನಗಳಲ್ಲಿ ಈ ಸಂಬಂಧ ರಾಜೀನಾಮೆ ಕೊಡಿಸಲಾಗುತ್ತದೆ ಎಂದರು.

ಬ್ಲ್ಯಾಕ್‌ಮೇಲ್‌ಗೆ ಮಣಿದಿಲ್ಲ: ರಾಜ್ಯದ ಮೈತ್ರಿ ಸರ್ಕಾರ ಪಕ್ಷೇತರರ ಬ್ಲ್ಯಾಕ್‌ಮೇಲ್ಗೆ ಮಣಿಯುವ ಪ್ರಶ್ನೆಯೇ ಇಲ್ಲ. ಯಾರನ್ನೂ ಕಡೆಗಣಿಸಬಾರದು ಎನ್ನುವ ಉದ್ದೇಶದಿಂದಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯಲ್ಲಿ ಪಕ್ಷೇತರರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಯಾವುದೇ ಪಕ್ಷಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರಲಿಲ್ಲ. ಅದಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಸೇರಿ ಮೈತ್ರಿ ಮಾಡಿಕೊಂಡಿದ್ದೇವೆ. ಮೊದಲಿನಿಂದಲೂ ಈ ಪ್ರಕ್ರಿಯೆ ನಡೆದುಕೊಂಡು ಬಂದಿದೆ. 

ಪಕ್ಷೇತರರಿಗೆ  ಸಚಿವ ಸ್ಥಾನ ನೀಡುತ್ತಿರುವುದೂ ಇದೇ ಮೊದಲೇನೂ ಅಲ್ಲ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಪಕ್ಷೇತರರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ರಚಿಸಿರಲಿಲ್ಲವೇ ಎಂದರು. 

ಇದೇ ವೇಳೆ, ಸಮ್ಮಿಶ್ರ ಸರ್ಕಾರ ಎಂಟು-ಒಂಬತ್ತು ತಿಂಗಳಲ್ಲಿ ಪತನ ಆಗಲಿದೆ ಎಂಬ ಮಾಜಿ ಶಾಸಕ ಕೋಳಿವಾಡ ಅವರ ಹೇಳಿಕೆಗೆ ಪುಟ್ಟರಾಜು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ನೂರಕ್ಕೆ ನೂರರಷ್ಟು 5 ವರ್ಷ ಪೂರ್ಣಗೊಳಿಸಲಿದೆ. ಸರ್ಕಾರ ಇನ್ನೇನು ಬಿದ್ದೇ ಹೋಗುತ್ತದೆ ಎಂದು ಸೋತವರೆಲ್ಲರೂ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಬಹಳ ಸುಭದ್ರವಾಗಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದು, ಯಾವುದೇ ತೊಂದರೆ ಇಲ್ಲ ಎಂದರು.