Asianet Suvarna News Asianet Suvarna News

ಉತ್ತರ ಕರ್ನಾಟಕ ಬಂದ್ ಬಿಜೆಪಿ ಪ್ರಾಯೋಜಿತ: ಡಿಕೆಶಿ

ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ರಾಜ್ಯ ಬೇಡಿಕೆ ಕೂಗು ಕೇಳಿಸುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಉತ್ತರ ಕನ್ನಡದ ಮಂದಿ ಸಿಟ್ಟಾಗಿದ್ದು, ಬಂದ್‌ಗೆ ಕರೆ ನೀಡಿದ್ದರು. ಆದರೆ, ಒಮ್ಮೆ ಎಲ್ಲವೂ ತಣ್ಣಗಾದಂತೆ ಭಾಸವಾಗುತ್ತಿದೆ. ಇದು ಬಿಜೆಪಿ ಪ್ರಾಯೋಜಿತ, ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

Minister DK Shivakumar Blames BJP Leaders for North Karnataka Bundh
Author
Bengaluru, First Published Aug 1, 2018, 4:08 PM IST

ಬೆಂಗಳೂರು[ಆ.01]: ಉತ್ತರ ಕರ್ನಾಟಕ ಬಂದ್ ಬಿಜೆಪಿ ನಾಯಕರ ಪ್ರಯೋಜಿತ ಕಾರ್ಯಕ್ರಮ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ಹಿಂದೆ ಬಿಜೆಪಿ ನಾಯಕರಿದ್ದಾರೆ. ಬಿಜೆಪಿ ಮಾಡಿಸುತ್ತಿರುವ ಕಾರ್ಯಕ್ರಮವಿದು. ನಾವು ಅಖಂಡ ಕರ್ನಾಟಕದ ಪರ ಇದ್ದೇವೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡುತ್ತೇವೆಂದು ಸಿಎಂ ಹೇಳಿರಬಹುದು. ಬೆಳಗಾವಿ ಜಿಲ್ಲೆಯಲ್ಲಿ ಗಡಿ ಸಮಸ್ಯೆ ಬೇರೆ ಇದೆ. ಅಲ್ಲದೇ ಸುವರ್ಣ ಸೌಧವನ್ನ ಬಳಸಿಕೊಳ್ಳುವ ಸಲುವಾಗಿ ಎರಡನೇ ರಾಜಧಾನಿಯಾಗಿ ಘೋಷಣೆ ಮಾಡುತ್ತೇನೆಂದು ಮಾತನಾಡಿರಬಹುದು. ಇದನ್ನು ಸಮರ್ಥಿಸಲು ನಾನು ವಕ್ತಾರನಲ್ಲ ಎಂದರು.

ಸಿದ್ದು ಔತಣಕೂಟದಲ್ಲಿ ಯಾವುದೇ ವಿಶೇಷವಿಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ  ಅವರು ಸಚಿವರಿಗೆ ಔತಣಕೂಟ ಏರ್ಪಡಿಸಿದ ವಿಚಾರಕ್ಕೆ ಮಾತನಾಡಿದ ಅವರು, ಇದರಲ್ಲಿ ತಪ್ಪೇನು ಇಲ್ಲ. ಅವರು ಸಮನ್ವಯ ಸಮಿತಿ ಅಧ್ಯಕ್ಷರು. ಸಭೆಯಲ್ಲಿ ಪ್ರಣಾಳಿಕೆ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಹಿಂದೆ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಈಗ ಸಚಿವರಿಗೆ ಏರ್ಪಡಿಸಿದ್ದಾರೆ. ಇದರಲ್ಲಿ ವಿಶೇಷವೇನು ಇಲ್ಲ ಎಂದರು.

ಉಸ್ತುವಾರಿ ನೇಮಕಕ್ಕೆ ಯಾವುದೇ ಅಸಮಾಧಾನವಿಲ್ಲ
ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಅಸಮಧಾನವಿಲ್ಲ. ಎಲ್ಲರ ಜೊತೆ ಚರ್ಚಿಸಿಯೇ ಉಸ್ತುವಾರಿ ಸಚಿವರ ನೇಮಕ ಮಾಡಲಾಗಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಸ್ಥಳೀಯರನ್ನು ನೇಮಿಸಬೇಡಿ ಅಂದಿದ್ದರು. ಎರಡೂ ಪಕ್ಷದವರು ಕುಳಿತು ನೇಮಕ ಮಾಡಲಾಗಿದೆ. ಅರಣ್ಯ ಸಚಿವ ಶಂಕರ್ ಗೆ ಕಾಂಗ್ರೆಸ್ ಪಕ್ಷ ದೊಡ್ಡ ಗಿಫ್ಟ್ ನೀಡಿದೆ. ಮೊದಲನೇ ಬಾರಿ ಗೆದ್ದ ಇವರಿಗೆ ಪ್ರಬಲ ಖಾತೆ ನೀಡಲಾಗಿದೆ. ಕೆಲವೊಂದನ್ನು ಆಡಳಿತ ದೃಷ್ಟಿಯಿಂದ ನೇಮಕ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

Follow Us:
Download App:
  • android
  • ios