ರಾಯ್‌ಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೆ ತರುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಘೋಷಿಸಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಜಾರಿ ಬಗ್ಗೆ ಘೋಷಣೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ ರಾಹುಲ್‌ ಮಾಡಿರುವ ಈ ಘೋಷಣೆ ಬಿಜೆಪಿಗೆ ಸಡ್ಡು ಹೊಡೆಯುವ ಯತ್ನ ಎಂದೇ ಭಾವಿಸಲಾಗಿದೆ.

15 ವರ್ಷಗಳ ಬಳಿಕ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದಕ್ಕಿದ ಹಿನ್ನೆಲೆಯಲ್ಲಿ ರೈತರಿಗೆ ಅಭಿನಂದನೆ ಸಲ್ಲಿಸಲು ಸೋಮವಾರ ಕಿಸಾನ್‌ ಆಭಾರ್‌ ಸಮ್ಮೇಳನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ರಾಹುಲ್‌, ‘ನಾವು ರಾಜ್ಯದಲ್ಲಿ ನುಡಿದಂತೆ ನಡೆದಿದ್ದೇವೆ. ರೈತರ ಸಾಲ ಮನ್ನಾ ಕುರಿತ ಭರವಸೆಯನ್ನು ಈಡೇರಿಸಿದ್ದೇವೆ. ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆ ಬಳಿಕ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ದೇಶಾದ್ಯಂತ ಬಡ ಜನರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೆ ತರಲಾಗುವುದು ಎಂದು ಘೋಷಿಸಿದರು.

ಬಳಿಕ ಈ ಯೋಜನೆ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಹುಲ್‌ ‘ನಮ್ಮ ಕೋಟ್ಯಂತರ ಸೋದರ ಮತ್ತು ಸೋದರಿಯರು ಕಡುಬಡತನದಲ್ಲಿ ಬಳಲುತ್ತಿದ್ದರೆ ನಾವು ಹೊಸ ಭಾರತವನ್ನು ಕಟ್ಟುವುದು ಸಾಧ್ಯವಿಲ್ಲ. ಹೀಗಾಗಿಯೇ ನಾವು ಬಡವರನ್ನು ಬಡತನದಿಂದ ಮೇಲೆತ್ತಲು ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೆ ತರುತ್ತೇವೆ. ಇದು ನಮ್ಮ ಗುರಿ ಮತ್ತು ಭರವಸೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಡಳಿತಾರೂಢ ಬಿಜೆಪಿ ಎರಡು ರೀತಿಯ ಭಾರತ ಸೃಷ್ಟಿಸಲು ಯತ್ನಿಸುತ್ತಿದೆ. ಒಂದು ರಫೇಲ್‌ ಹಗರಣ, ಅನಿಲ್‌ ಅಂಬಾನಿ, ನೀರವ್‌ ಮೋದಿ, ವಿಜಯ್‌ ಮಲ್ಯ, ಮೇಹುಲ್‌ ಚೋಕ್ಸಿ ಹಾಗೂ ಇತರರಿಗಾಗಿ ಹಾಗೂ ಮತ್ತೊಂದು ಬಡ ರೈತರಿಗಾಗಿ,’ ಎಂದು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದರು.