ಹಳೆಯ ನೋಟುಗಳು ಇದ್ದರೆ ಕನಿಷ್ಠ 10 ಸಾವಿರ ದಂಡ ಅಥವಾ ನಗದು ಹೊಂದಿರುವ ಐದು ಪಟ್ಟು ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ನವದೆಹಲಿ(ಡಿ.29): ಹಳೆಯ ಮುಖಬೆಲೆಯ ನೋಟುಗಳನ್ನು ಹೊಂದಿದ್ದರೆ ದಂಡ ಮಾತ್ರ. ಜೈಲು ಶಿಕ್ಷೆ ಇಲ್ಲ. ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಡಿ.31ರಿಂದ ಸುಗ್ರೀವಾಜ್ಞೆ ಅನುಷ್ಠಾನಗೊಳ್ಳಲಿದೆ. ಅದರಲ್ಲಿ ಪ್ರಸ್ತಾವಿತ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸುವುದನ್ನು ಕೈಬಿಡಲಾಗಿದೆ. ಜೈಲು ಶಿಕ್ಷೆಗೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಹಳೆಯ ನೋಟುಗಳು ಇದ್ದರೆ ಕನಿಷ್ಠ 10 ಸಾವಿರ ದಂಡ ಅಥವಾ ನಗದು ಹೊಂದಿರುವ ಐದು ಪಟ್ಟು ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಸುಗ್ರೀವಾಜ್ಞೆ ಪ್ರಕಾರ ಯಾವನೇ ಒಬ್ಬ ವ್ಯಕ್ತಿ ಹಳೆಯ ಮುಖಬೆಲೆಯ 500, 1 ಸಾವಿರ ಮುಖಬೆಲೆಯ ಹತ್ತು ನೋಟುಗಳನ್ನು ಸಂಗ್ರಹಿಸಿ ಇರಿಸಲು ಅವಕಾಶ ಉಂಟು. ಹಣಕಾಸು ಕ್ಷೇತ್ರದ ಸಂಶೋಧಕರಿಗೆ 25 ನೋಟುಗಳನ್ನು ಇರಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಇದೇ ವೇಳೆ ಜ.1ರಿಂದ ಮಾ.31ರ ಅವಧಿಯಲ್ಲಿ ಹಳೆಯ ಮುಖಬೆಲೆಯ ನೋಟುಗಳನ್ನು ಜಮಾ ಮಾಡುವ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿದರೆ 5 ಸಾವಿರ ದಂಡ ಅಥವಾ ಜಮೆ ಮಾಡಲು ನಿರ್ಧಾರ ಮಾಡಿರುವ ಮೊತ್ತದ ಐದು ಪಟ್ಟು ದಂಡ ವಿಧಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿ ತಂದು ಅಮಾನ್ಯಗೊಳಿಸಿದ ನೋಟುಗಳನ್ನು ಮರಳಿ ವಿತರಿಸದಂತೆ ಮತ್ತು ನಾಶಮಾಡಲು ಕಾನೂನಾತ್ಮಕ ಅಧಿಕಾರಕ್ಕೆ ಬೆಂಬಲ ನೀಡಿದಂತಾಗುತ್ತದೆ.
