Asianet Suvarna News Asianet Suvarna News

ಅತ್ಯಾಚಾರ ಪ್ರಕರಣ : ರಾಜ್ಯ ತೊರೆದು ತವರಿನತ್ತ ಮುಖ ಮಾಡಿದ ವಲಸಿಗರು

ವಲಸಿಗ ಕಾರ್ಮಿಕನಿಂದ ನಡೆದ ಅತ್ಯಾಚಾರ ಪ್ರಕರಣ, ಇದೀಗ ಗುಜರಾತ್‌ನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅತ್ಯಾಚಾರ ಪ್ರಕರಣವನ್ನೇ ಮುಂದಿಟ್ಟುಕೊಂಡು, ವಲಸಿಗರಿಗೆ ರಾಜ್ಯ ಬಿಟ್ಟು ತೊರೆಯುವಂತೆ ಕೆಲ ಸ್ಥಳೀಯರು ಬೆದರಿಕೆ ಹಾಕಿ, ದಾಳಿಯನ್ನೂ ನಡೆಸಿದ್ದಾರೆ.

Migrant Workers Forced To Leave Gujarat
Author
Bengaluru, First Published Oct 8, 2018, 9:18 AM IST

ಅಹಮದಾಬಾದ್‌: ಇತ್ತೀಚೆಗೆ ಪುಟ್ಟಬಾಲಕಿಯೊಬ್ಬಳ ಮೇಲೆ ವಲಸಿಗ ಕಾರ್ಮಿಕನಿಂದ ನಡೆದ ಅತ್ಯಾಚಾರ ಪ್ರಕರಣ, ಇದೀಗ ಗುಜರಾತ್‌ನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅತ್ಯಾಚಾರ ಪ್ರಕರಣವನ್ನೇ ಮುಂದಿಟ್ಟುಕೊಂಡು, ವಲಸಿಗರಿಗೆ ರಾಜ್ಯ ಬಿಟ್ಟು ತೊರೆಯುವಂತೆ ಕೆಲ ಸ್ಥಳೀಯರು ಬೆದರಿಕೆ ಹಾಕಿ, ದಾಳಿಯನ್ನೂ ನಡೆಸಿದ್ದಾರೆ. ಹೀಗಾಗಿ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ವಲಸಿಗ ಕಾರ್ಮಿಕರು ಆತಂಕದಿಂದ ರಾಜ್ಯವನ್ನು ತೊರೆದು ತವರಿನತ್ತ ಮುಖ ಮಾಡಿದ್ದಾರೆ.

ಗುಜರಾತ್‌ನ ಉದ್ಯಮಗಳು, ವಲಸಿಗರ ಕಾರ್ಮಿಕರನ್ನೇ ಬಹುವಾಗಿ ನಂಬಿಕೊಂಡಿರುವ ಹಿನ್ನೆಲೆಯಲ್ಲಿ ಈ ಘಟನೆ, ಉದ್ಯಮ ವಲಯಕ್ಕೆ ಪೆಟ್ಟು ನೀಡಲಿದೆ ಎನ್ನಲಾಗಿದೆ. ಭೀತಿಗೆ ಒಳಗಾಗಬೇಡಿ. ನಿಮಗೆ ಎಲ್ಲಾ ರೀತಿಯ ರಕ್ಷಣೆ ನೀಡಲಾಗುವುದು ಎಂಬ ಪೊಲೀಸರು ಭರವಸೆ ಕೂಡಾ ಕಾರ್ಮಿಕರ ವಲಸೆಯನ್ನು ತಡೆಯಲು ಸಾಧ್ಯವಾಗಿಲ್ಲ.

ಏನಾಗಿತ್ತು?: ಕಳೆದ ತಿಂಗಳು ಸಬರ್‌ಕಾಂತಾ ಜಿಲ್ಲೆಯಲ್ಲಿ 14 ತಿಂಗಳ ಪುಟ್ಟಕಂದನ ಮೇಲೆ ಬಿಹಾರದ ಹಿಮ್ಮತ್‌ನಗರ ಮೂಲದ ವಲಸೆ ಕಾರ್ಮಿಕನೊಬ್ಬ ಅತ್ಯಾಚಾರವೆಸಗಿದ್ದ. ಘಟನೆಯಲ್ಲಿ ವಲಸಿಗ ಕಾರ್ಮಿಕರ ಪಾತ್ರ ಗೊತ್ತಾಗುತ್ತಲೇ ಸ್ಥಳೀಯರು, ವಲಸೆ ಕಾರ್ಮಿಕರ ವಿರುದ್ಧ ತಿರುಗಿಬಿದ್ದಿದ್ದು, ರಾಜ್ಯ ಬಿಟ್ಟು ತೊರೆಯುವಂತೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಪ್ರಮಾಣದಲ್ಲಿ ಸಂದೇಶಗಳು ರವಾನಿಸಲಾಗಿದೆ. ಜೊತೆಗೆ ಮೆಹ್ಸಾನಾ, ಗಾಂಧೀನಗರ್‌, ಪಠಾಣ್‌, ಸಬರ್‌ಕಾಂತ್‌ ಮತ್ತು ಅರಾವಳಿ ಜಿಲ್ಲೆಯ ಕೆಲವೆಡೆ ಸ್ಥಳೀಯರು ವಲಸಿಗರ ಮೇಲೆ ಹಲ್ಲೆ ಕೂಡಾ ನಡೆಸಿದ್ದಾರೆ.

ಇನ್ನೊಂದೆಡೆ ಅತ್ಯಾಚಾರಕ್ಕೆ ತುತ್ತಾದ ಬಾಲಕಿ ಠಾಕೂರ್‌ ಸಮುದಾಯಕ್ಕೆ ಸೇರಿದವಳಾಗಿರುವ ಹಿನ್ನೆಲೆಯಲ್ಲಿ, ಒಬಿಸಿ ನಾಯಕ ಹಾಗೂ ಕಾಂಗ್ರೆಸ್‌ ಶಾಸಕ ಅಲ್ಪೇಶ್‌ ಠಾಕೂರ್‌, ಬಾಲಕಿಗೆ ಸೂಕ್ತ ನ್ಯಾಯ ದೊರಕದೇ ಹೋದಲ್ಲಿ ಅ.8ರಿಂದ ಆಮರಣಾಂತ ಪ್ರತಿಭಟನೆಯ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಕ್ಕೆ ತುತ್ತಾಗಿರುವ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಬಸ್‌, ರೈಲು ಸೇರಿದಂತೆ ಸಿಕ್ಕಸಿಕ್ಕ ವಾಹನ ಏರಿ ತವರಿನತ್ತ ಮುಖ ಮಾಡಿದ್ದಾರೆ.

ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ 200ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಯಾವುದೇ ಭೀತಿ ಎದುರಾದಲ್ಲಿ ತಕ್ಷಣವೇ ಸ್ಥಳೀಯ ಠಾಣೆಗೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಇದು ವಲಸಿಗರ ಭೀತಿ ದೂರ ಮಾಡುವಲ್ಲಿ ಹೆಚ್ಚಿನ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.

Follow Us:
Download App:
  • android
  • ios