Asianet Suvarna News Asianet Suvarna News

MiG-21 Crash in Rajasthan : ಪೈಲಟ್ ದುರ್ಮರಣ, ವರ್ಷದ ಐದನೇ ಘಟನೆ!

ತರಬೇತಿ ಹಾರಾಟದ ವೇಳೆ ಮಿಗ್-21 ಯುದ್ಧ ವಿಮಾನ ಪತನ
ಭಾರತೀಯ ವಾಯುಸೇನೆಯ ಅಧಿಕಾರಿ ದುರ್ಮರಣ
ಹಾಲಿ ವರ್ಷದಲ್ಲಿ ಸಂಭವಿಸಿದ 5ನೇ ಘಟನೆ

MiG 21 fighter aircraft of the Indian Air Force crashed in Rajasthans Jaisalmer killing the pilot Wing Commander Harshit Sinha san
Author
Bengaluru, First Published Dec 25, 2021, 12:05 AM IST

ಜೈಸಲ್ಮೇರ್ (ಡಿ. 24): ಭಾರತೀಯ ವಾಯುಸೇನೆಯಲ್ಲಿ (Indian Air Force) ಅತ್ಯಂತ ಸುದೀರ್ಘ ಅವಧಿಯ ಕಾಲ ಸೇವೆ ಸಲ್ಲಿಸಿದ ಯುದ್ಧ ವಿಮಾನ ಎನಿಸಿಕೊಂಡಿರುವ ರಷ್ಯಾ ನಿರ್ಮಿತ ಮಿಗ್-21 ಬೈಸನ್ (MiG-21 Bison)ಯುದ್ಧ ವಿಮಾನ ಮತ್ತೊಮ್ಮೆ ಅಪಘಾತಕ್ಕೆ ಈಡಾಗಿದೆ. ರಾಜಸ್ಥಾನದ (Rajasthan) ಜೈಸಲ್ಮೇರ್ ನಲ್ಲಿ (Jaisalmer) ತರಬೇತಿ ಹಾರಾಟದಲ್ಲಿ ಪಾಲ್ಗೊಂಡಿದ್ದ ವೇಳೆ ಮಿಗ್-21 ಅಪಘಾತಗೊಂಡಿದ್ದು, ವಾಯುಸೇನೆಯ ಅಧಿಕಾರಿ ಸಾವನ್ನಪ್ಪಿದ್ದಾರೆ. ಮುಂಬರುವ ವರ್ಷಗಳಲ್ಲಿ ಹಳೆಯ ಜೆಟ್ ವಿಮಾನಗಳನ್ನು ಹೊಸದಾದ ಯುದ್ಧ ವಿಮಾನಗಳೊಂದಿಗೆ ಬದಲಾಯಿಸುವ ಗುರಿಯನ್ನು ಇಟ್ಟುಕೊಂಡಿರುವ ಭಾರತೀಯ ವಾಯುಸೇನೆಯ ಯೋಜನೆಗಳ ಮೇಲೆ ಈ ಅಪಘಾತ ಮತ್ತೊಮ್ಮೆ ಗಮನ ಕೇಂದ್ರೀಕರಿಸುವಂತೆ ಮಾಡಿದೆ. 

ಶುಕ್ರವಾರ ರಾತ್ರಿ 8.30ರ ವೇಳೆಗೆ ಜೈಸೆಲ್ಮೇರ್ ನಲ್ಲಿ ಭಾರತೀಯ ವಾಯುಸೇನೆಗೆ ಸೇರಿದಂತೆ ಮಿಗ್-21 ಬೈಸನ್ ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ( Wing Commander Harshit Sinha) ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಐಎಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಮಿಗ್-21 ಬೈಸನ್ ಯುದ್ಧ ವಿಮಾನ ಹಾಲಿ ವರ್ಷದಲ್ಲಿ ಪತನಗೊಂಡಿದ್ದು ಇದು ಐದನೇ ಬಾರಿಯಾಗಿದೆ. "ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರು ಇಂದು ರಾತ್ರಿ ಸಂಭವಿಸಿದ ಮಿಗ್-21 ಯುದ್ಧ ವಿಮಾನ ಅಪಘಾತದಲ್ಲಿ ಮೃತರಾದರೆಂದು ತಿಳಿಸಲು ಐಎಎಫ್ ವಿಷಾದಿಸುತ್ತದೆ. ಈ ಕುಟುಂಬದ ನೋವಿನಲ್ಲಿ ಐಎಎಫ್ ಕೂಡ ಭಾಗಿಯಾಗಿದೆ'' ಎಂದು ಟ್ವೀಟ್ ಮಾಡಿದೆ.  ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಐಎಎಫ್, ಯುದ್ಧ ವಿಮಾನ ಅಪಘಾತದ ಕುರಿತಂತೆ ತನಿಖೆಗೆ ಆಗ್ರಹ ಮಾಡಿತ್ತು. ಈ ತಿಂಗಳ ಆರಂಭದಲ್ಲಿ ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತವನ್ನು ದೇಶದ ಜನತೆ ಮರೆಯುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ. 
 


ಮಿಗ್-21 ಮಾದರಿಯ ಯುದ್ಧ ವಿಮಾನದಲ್ಲಿ ಬೈಸನ್ ಜೆಟ್ ಹೊಸ ಮಾದರಿಯದ್ದಾಗಿದ್ದರೂ, ಹಲವು ವರ್ಷಗಳಿಂದ ಐಎಎಫ್ ನ (IAF)ಸೇವೆಯಲ್ಲಿದೆ. ಪ್ರಸ್ತುತ ಐಎಎಫ್ ನಲ್ಲಿ ನಾಲ್ಕು ಸ್ಕ್ವಾಡ್ರನ್ ಮಿಗ್-21 ಬೈಸನ್ ಯುದ್ಧ ವಿಮಾನಗಳಿವೆ. ಒಂದು ಸ್ಕ್ವಾಡ್ರನ್ ನಲ್ಲಿ 16 ರಿಂದ 18 ಫೈಟರ್ ಜೆಟ್ ಗಳು ಇರುತ್ತವೆ. ಪ್ರಸ್ತುತ ಇರುವ ಬೈಸನ್ ಯುದ್ಧ ವಿಮಾನಗಳು ಮಿಗ್-21 ಮಾದರಿಯಲ್ಲಿ ಆಧುನಿಕ ಮಾದರಿಯದ್ದಾಗಿ ಮುಂದಿನ ಮೂರು-ನಾಲ್ಕು ವರ್ಷಗಳ ಕಾಲ ಸೇವೆ ಕಲ್ಪಿಸುವ ಅವಕಾಶ ಹೊಂದಿದೆ. 1963ರಲ್ಲಿ ಐಎಎಫ್ ಮೊದಲ ಸಿಂಗಲ್ ಇಂಜಿನ್ ಮಿಗ್-21 ಯುದ್ಧವಿಮಾನವನ್ನು ಸೇರಿಸಿಕೊಂಡಿತ್ತು. ಭಾರತ ಈವರೆಗೂ 874 ಸೋವಿಯತ್ ರಷ್ಯಾ ನಿರ್ಮಿತ ಸೂಪರ್ ಸಾನಿಕ್ ಫೈಟರ್ ಜೆಟ್ ಗಳು ದೇಶದ ವಾಯುಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಖರೀದಿ ಮಾಡಿದೆ. ಈ 874 ಯುದ್ಧ ವಿಮಾನಗಳ ಪೈಕಿ ಶೇಕಡಾ 60 ರಷ್ಟು ಯುದ್ಧ ವಿಮಾನಗಳನ್ನು ಪರವಾನಿಗಿ ಪಡೆದು ಭಾರತದಲ್ಲಿಯೇ ನಿರ್ಮಾಣ ಮಾಡಲಾಗಿದೆ.

Helicopter Accidents : ಕಳೆದ 5 ವರ್ಷಗಳಲ್ಲಿ 15 ಸೇನಾ ದುರಂತ!
ಕಳೆದ ಆರು ದಶಕಗಳಲ್ಲಿ 400ಕ್ಕೂ ಅಧಿಕ ಮಿಗ್-21 ಯುದ್ಧ ವಿಮಾನಗಳ ಅಪಘಾತವಾಗಿದ್ದು, 200ಕ್ಕೂ ಅಧಿಕ ಪೈಲಟ್ ಗಳು ಸಾವಿಗೀಡಾಗಿದ್ದಾರೆ. ಆ ಕಾರಣಕ್ಕಾಗಿ ಈ ಯುದ್ಧ ವಿಮಾನವನ್ನು "ಹಾರುವ ಶವಪೆಟ್ಟಿಗೆ", (flying coffin)"ವಿಡೋ ಮೇಕರ್" ಎನ್ನುವ ಕುಖ್ಯಾತ ಹೆಸರುಗಳನ್ನು ಪಡೆದುಕೊಂಡಿದೆ. ಈಗಾಗಲೇ ರಕ್ಷಣಾ ಪಡೆಗಳ ಅನುಭವಿಗಳು, ಮಿಗ್-21 ಯುದ್ಧವಿಮಾನವನ್ನು ವಾಯುಸೇನೆಯಿಂದ ಹೊರಗಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಹೊಸ ಫೈಟರ್ ಜೆಟ್ ಗಳು ಸೇರುವವರೆಗೂ ಮಿಗ್-21 ಜೆಟ್ ಗಳನ್ನು ಉಳಿಸಿಕೊಳ್ಳುವ ಇರಾದೆಯಲ್ಲಿ ಐಎಎಫ್ ಇದೆ. ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಲು ಇದೇ ಬೈಸನ್ ಯುದ್ಧ ವಿಮಾನಗಳನ್ನು ಬಳಸಲಾಗಿತ್ತು.

Follow Us:
Download App:
  • android
  • ios