ನವದೆಹಲಿ(ಆ.10): ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂಬ ವದಂತಿಯನ್ನು ಕೇಂದ್ರ ಗೃಹ ಇಲಾಖೆ ತಳ್ಳಿ ಹಾಕಿದೆ.

ಕಣಿವೆ ರಾಜಧಾನಿ ಶ್ರೀನಗರದಲ್ಲಿ ಶಾಂತಿ ನೆಲೆಸಿದ್ದು, ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಗೃಹ ಇಲಾಖೆ ಕಳಕಳಿಯ ಮನವಿ ಮಾಡಿದೆ.

ಸಂವಿಧಾನದ 370ನೇ ವಿಧಿ ರದ್ಧತಿ ಬಳಿಕ ಶ್ರೀನಗರದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಕೇವಲ ವದಂತಿ ಎಂದೂ ಗೃಹ ಇಲಾಖೆ ಸ್ಪಷ್ಟಪಡಿಸಿದೆ.

ಕಣಿವೆಯಲ್ಲಿ ಸಂಪೂರ್ಣ ಶಾಂತಿ ನೆಲೆಸಿದ್ದು, ಯಾವುದೇ ರೀತಿಯ ಕಲಹ ಅಥವಾ ಪ್ರತಿಭಟನೆ ನಡೆದಿಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಸೆ. 144ರ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ನಿಷೇಧಾಜ್ಞೆ ಹಿಂಪಡೆಯಲಾಗುವುದು ಎಂದು ಇಲಾಖೆ ತಿಳಿಸಿದೆ.