ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ.!
ಗೊಟ್ಟಿಗೆರೆಯಿಂದ ನಾಗವಾರಕ್ಕೆ ಸಂಚರಿಸುವ ಮೆಟ್ರೋ ರೈಲುಗಳೇ ಪ್ರಸ್ತಾವಿತ ಕೆಐಎಎಲ್ ಮಾರ್ಗದಲ್ಲಿ ನಾಗವಾರದಿಂದ ಸಂಚರಿಸಲಿವೆ. ವಿಮಾನ ನಿಲ್ದಾಣದ ಮಾರ್ಗದಲ್ಲಿ ಹೆಚ್ಚು ತೂಕದ ಸರಂಜಾಮುಗಳನ್ನು ಸಂಗ್ರಹಿಸಲು ಮೀಸಲು ಸ್ಥಳಾವಕಾಶ ಹೊಂದಲಿದೆ.
ಬೆಂಗಳೂರು(ಡಿ.12): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದಿಂದ 2021ರ ವೇಳೆಗೆ ಮೆಟ್ರೋ ರೈಲು ಸಂಚಾರದ ಸಂಪರ್ಕ ಕಲ್ಪಿಸುವ 5,950 ಕೋಟಿ ರು. ವೆಚ್ಚದ ಮೆಟ್ರೋ ವಿಸ್ತೀರ್ಣ ಯೋಜನೆಯ ಸಮಗ್ರ ಯೋಜನಾ ವರದಿಗೆ (ಡಿಪಿಆರ್) ಸಚಿವ ಸಂಪುಟ ಅನುಮೋದನೆ ನೀಡಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಗೊಟ್ಟಿಗೆರೆಯಿಂದ ನಾಗವಾರಕ್ಕೆ ಸಂಚರಿಸುವ ಮೆಟ್ರೋ ರೈಲುಗಳೇ ಪ್ರಸ್ತಾವಿತ ಕೆಐಎಎಲ್ ಮಾರ್ಗದಲ್ಲಿ ನಾಗವಾರದಿಂದ ಸಂಚರಿಸಲಿವೆ. ವಿಮಾನ ನಿಲ್ದಾಣದ ಮಾರ್ಗದಲ್ಲಿ ಹೆಚ್ಚು ತೂಕದ ಸರಂಜಾಮುಗಳನ್ನು ಸಂಗ್ರಹಿಸಲು ಮೀಸಲು ಸ್ಥಳಾವಕಾಶ ಹೊಂದಲಿದೆ. ಈ ರೈಲುಗಳು ಆರು ಕಾರ್'ಗಳನ್ನು ಒಳಗೊಳ್ಳಲಿವೆ. ಮಾರ್ಗದ ವೇಗದ ಮಿತಿಯನ್ನು ಗಂಟೆಗೆ ಕನಿಷ್ಠ 60ರಿಂದ ಗರಿಷ್ಠ 95 ಕಿಮೀಗೆ ನಿಗದಿಪಡಿಸಲಾಗುವುದು.
ಪ್ರಮುಖ ಅಂಶಗಳು:
7 ನಿಲ್ದಾಣಗಳು: ರಾಮಕೃಷ್ಣ ಹೆಗಡೆ ನಗರ, ಜಕ್ಕೂರು, ಯಲಹಂಕ, ಕೋಗಿಲು ಕ್ರಾಸ್, ಚಿಕ್ಕಜಾಲ, ಟ್ರಂಪೆಟ್, ಕೆಂಪೇಗೌಡ ವಿಮಾನ ನಿಲ್ದಾಣ.
ಮಾರ್ಗದ ಒಟ್ಟು ಉದ್ದ: 29.62 ಕಿಮೀ.
ನಿರೀಕ್ಷಿತ ನಿತ್ಯ ಪ್ರಯಾಣಿಕರು: 1.2 ಲಕ್ಷ.
ಭೂಸ್ವಾಧೀನ ಅಧಿಸೂಚನೆ: 3 ತಿಂಗಳು
ಟೆಂಡರ್ ಆಹ್ವಾನ: 3 ತಿಂಗಳು
ಕಾಮಗಾರಿ ಶುರು: 6 ತಿಂಗಳು
ಸಿವಿಲ್ ಕಾಮಗಾರಿ: 30 ತಿಂಗಳು
ಒಟ್ಟು ಅವಧಿ: 42 ತಿಂಗಳು