ಕಾಂಗ್ರೆಸ್‌ಲ್ಲಿ 4 ಎಂಎಲ್‌ಸಿ ಸ್ಥಾನಗಳಿಗೆ ಕಗ್ಗಂಟು

Mess Over MLC Post in Karnataka Congress
Highlights

ಖಾತೆ-ಕ್ಯಾತೆ ಮಾತ್ರವಲ್ಲ, ತನ್ನ ಪಾಲಿನ ನಾಲ್ಕು ವಿಧಾನಪರಿಷತ್‌ ಸ್ಥಾನಗಳಿಗೆ ಹೆಸರು ಅಂತಿಮಪಡಿಸುವ ವಿಚಾರದಲ್ಲೂ ಕಾಂಗ್ರೆಸ್‌ಗೆ ತೀವ್ರ ಗೊಂದಲ ಕಾಡಿದೆ. ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಒಂದೇ ದಿನ (ಮೇ 31) ಬಾಕಿಯಿದೆ. ಆದರೆ, ನಾಯಕರು ತಮ್ಮ ಆಪ್ತರಿಗೆ ಎಂಎಲ್‌ಸಿ ಪಟ್ಟಕೊಡಿಸಲು ಪಟ್ಟು ಹಿಡಿದಿರುವುದರಿಂದ ಹೆಸರು ಅಂತಿಮಗೊಳಿಸುವುದು ಸಮಸ್ಯೆಯಾಗಿದೆ.

ಬೆಂಗಳೂರು : ಖಾತೆ-ಕ್ಯಾತೆ ಮಾತ್ರವಲ್ಲ, ತನ್ನ ಪಾಲಿನ ನಾಲ್ಕು ವಿಧಾನಪರಿಷತ್‌ ಸ್ಥಾನಗಳಿಗೆ ಹೆಸರು ಅಂತಿಮಪಡಿಸುವ ವಿಚಾರದಲ್ಲೂ ಕಾಂಗ್ರೆಸ್‌ಗೆ ತೀವ್ರ ಗೊಂದಲ ಕಾಡಿದೆ. ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಒಂದೇ ದಿನ (ಮೇ 31) ಬಾಕಿಯಿದೆ. ಆದರೆ, ನಾಯಕರು ತಮ್ಮ ಆಪ್ತರಿಗೆ ಎಂಎಲ್‌ಸಿ ಪಟ್ಟಕೊಡಿಸಲು ಪಟ್ಟು ಹಿಡಿದಿರುವುದರಿಂದ ಹೆಸರು ಅಂತಿಮಗೊಳಿಸುವುದು ಸಮಸ್ಯೆಯಾಗಿದೆ.

ಈ ಬಾರಿ ಕಾಂಗ್ರೆಸ್‌ನ ನಾಲ್ಕು ಸದಸ್ಯರಾದ ಮೋಟಮ್ಮ, ಕೆ.ಗೋವಿಂದರಾಜು, ಸಿ.ಎಂ. ಇಬ್ರಾಹಿಂ, ಎಂ.ಆರ್‌. ಸೀತಾರಾಂ ಅವರ ಅವಧಿ ಮುಗಿದಿದ್ದು, ಐವನೆಯವರಾದ ಬೈರತಿ ಸುರೇಶ್‌ ಅವರು ವಿಧಾನ ಸಭೆ ಚುನಾವಣೆಗೆ ಕಣದಲ್ಲಿದ್ದ ಕಾರಣ ರಾಜೀನಾಮೆ ನೀಡಿದ್ದರು. ಹೀಗೆ ಐದು ಸದಸ್ಯ ಸ್ಥಾನಗಳನ್ನು ಕಾಂಗ್ರೆಸ್‌ ಕಳೆದುಕೊಂಡಿದ್ದರೂ, ಹಾಲಿ ವಿಧಾನಸಭೆಯ ಸಂಖ್ಯಾಬಲದ ಪ್ರಕಾರ ಪಕ್ಷಕ್ಕೆ ನಾಲ್ಕು ಸ್ಥಾನ ಮಾತ್ರ ದೊರೆಯಲಿದೆ.

ಈ ನಾಲ್ಕು ಸ್ಥಾನಗಳಿಗೆ ಹತ್ತಾರು ಮಂದಿ ಪೈಪೋಟಿ ನಡೆಸಿದ್ದಾರೆ. ಒಕ್ಕಲಿಗರ ಕೋಟಾದಲ್ಲಿ ಕೆ.ಗೋವಿಂದರಾಜು ಅವರು ಮರು ಆಯ್ಕೆ ಬಯಸಿದ್ದು, ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಾಬಿ ನಡೆಸಿದ್ದಾರೆ. ಆದರೆ, ಒಕ್ಕಲಿಗ ಕೋಟಾದ ನಿರ್ಧಾರವನ್ನು ನನಗೆ ಬಿಡಬೇಕು ಎಂದು ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿದ್ದು, ಅವರು ತಮ್ಮ ಆಪ್ತ ವಿನಯ್‌ ಕಾರ್ತಿಕ್‌ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನ ಲಾಗಿದೆ. ಇನ್ನು ವಿಧಾನಪರಿಷತ್‌ ಸದಸ್ಯರಾಗಿ ಕೇವಲ ಆರು ತಿಂಗಳು ಕಳೆದಿರುವ ಸಿ.ಎಂ. ಇಬ್ರಾಹಿಂ ಅವರೂ ಮರು ಆಯ್ಕೆ ಬಯಸಿದ್ದು, ಅವರಿಗೂ ಸಿದ್ದರಾಮಯ್ಯ ಅವರ ಬೆಂಬಲವಿದೆ. ಆದರೆ, ರಾಜ್ಯದ ಇತರ ನಾಯಕರು ಮತ್ತು ಗುಲಾಂ ನಬಿ ಆಜಾದ್‌ ಅವರು ಕೋಲಾರದ ನಜೀರ್‌ ಅಹ್ಮದ್‌ ಪರ ವಾದ ಮಾಡುತ್ತಿದ್ದಾರೆ ಎನ್ನಲಾಗಿದೆ.

ಉಳಿದಂತೆ ಮಾಜಿ ಸಚಿವ ಎಂ.ಆರ್‌. ಸೀತಾರಾಂ ಅವರು ಸಹ ಮರು ಆಯ್ಕೆ ಬಯಸಿದ್ದಾರೆ. ಇನ್ನು ಮೋಟಮ್ಮ ಅವರಿಂದ ತೆರವಾದ ಸ್ಥಾನವನ್ನು ಮತ್ತೆ ದಲಿತರಿಗೆ ನೀಡಬೇಕು ಎಂಬ ವಾದವಿದ್ದರೂ, ಶೀಘ್ರ ದಲ್ಲೇ ಪರಮೇಶ್ವರ್‌ ಅವರಿಂದ ತೆರವಾಗಿರುವ ಸ್ಥಾನವನ್ನು ತುಂಬಬಹುದು. ಹೀಗಾಗಿ ಈ ಬಾರಿ ದಲಿತರಿಗೆ ಬೇಡ, ಅದನ್ನು ಹಿಂದುಳಿದವರಿಗೆ ನೀಡುವುದು ಸೂಕ್ತ ಎಂಬ ವಾದವೂ ಇದೆ. ಆದ್ದರಿಂದ ಹಿಂದುಳಿದ ವರ್ಗಗಳಿಂದ ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ಮಾಜಿ ಮೇಯರ್‌ ರಾಮಚಂದ್ರಪ್ಪ, ಪರಮೇಶ್ವರ್‌ ಬೆಂಬಲ ಪಡೆದಿರುವ ವೇಣುಗೋಪಾಲ್‌ ಅವರು ಪ್ರಯತ್ನ ನಡೆಸುತ್ತಿದ್ದಾರೆ.

ಒಂದು ವೇಳೆ ಈ ಸ್ಥಾನವನ್ನು ಉತ್ತರ ಕರ್ನಾಟಕದ ಹಿಂದುಳಿದ ವರ್ಗದವರಿಗೆ ನೀಡಬೇಕು ಎಂದು ತೀರ್ಮಾನವಾದರೆ ಆಗ ಬಿ.ಬಿ.ಚಿಮ್ಮನಕಟ್ಟಿಹಾಗೂ ಶಿವಣ್ಣವರ್‌ ಅವರ ಹೆಸರು ಪರಿಗಣನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಗಳ ಪ್ರಕಾರ ಬುಧವಾರ ತಡರಾತ್ರಿ ವೇಳೆಗೆ ನಾಲ್ಕು ಸದಸ್ಯ ಸ್ಥಾನಗಳಿಗೆ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.

loader