ನವದೆಹಲಿ: ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆ ಅಥವಾ ಆಯುಷ್ಮಾನ್‌ ಭಾರತ್‌ ಯೋಜನೆಯ ಅನುಷ್ಠಾನಕ್ಕೆ ರಾಜ್ಯಗಳ ನೆರವು ಪಡೆಯುವ ನಿಟ್ಟಿನಿಂದ ಶೀಘ್ರದಲ್ಲೇ ರಾಜ್ಯ ಆರೋಗ್ಯ ಕಾರ್ಯದರ್ಶಿಗಳ ಸಭೆ ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಭೆಯಲ್ಲಿ ಚರ್ಚಿಸುವ ವಿಷಯಗಳ ಬಗ್ಗೆ ವಿಸ್ತೃತ ಟಿಪ್ಪಣಿಯೊಂದನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ವಿವಿಧ ರಾಜ್ಯಗಳಲ್ಲಿ ಹಾಲಿ ಇರುವ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿನ ಅಡಿಯಲ್ಲಿ ತಂದು ವಿಸ್ತೃತವಾದ ರಾಷ್ಟ್ರೀಯ ಯೋಜನೆಯನ್ನು ರೂಪಿಸುವುದು ಮತ್ತು ಒಂದಕ್ಕಿಂತ ಹೆಚ್ಚಿನ ವಿಮಾ ಯೋಜನೆಗಳನ್ನು ವಿಲೀನಗೊಳಿಸಿ ವಾಸ್ತವಿಕ ಪ್ರೀಮಿಯಂ ಮೊತ್ತದೊಂದಿಗೆ ಸಮಗ್ರ ವಿಮಾ ಯೋಜನೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ರಾಜ್ಯದ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ಸೇವೆಯನ್ನು ನೀಡಲಾಗಿದೆ. ಆದರೆ, ಸಣ್ಣ ಮೊತ್ತವನ್ನು ಯೋಜನೆಗೆ ಮೀಸಲಿಡಲಾಗಿದೆ. ಅಲ್ಲದೇ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಜಾರಿಗೊಳಿಸಿರುವ ಆರೋಗ್ಯ ಯೋಜನೆಗಳು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಇರುವ ಆರೋಗ್ಯ ಸೇವೆಗಳನ್ನು ಸಂಯೋಜಿಸುವ ಸಾಧ್ಯತೆಯನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ವಾರ್ಷಿಕ 12 ಸಾವಿರ ಕೋಟಿ ರು. ವೆಚ್ಚವಾಗಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ.