ಉದ್ಯಾನನಗರಿ ಜನತೆಗೆ ಕಡಿಮೆ ದರದಲ್ಲಿ ಊಟ-ತಿಂಡಿ ಒದಗಿಸಲು ಸರ್ಕಾರ ಜಾರಿಗೆ ತರುತ್ತಿರುವ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟೀನ್‌' ಯೋಜನೆಯಡಿ ಅಡುಗೆ ಸಿದ್ಧಪಡಿಸಿ ಪೂರೈಸಲು ಬಿಬಿಎಂಪಿ ಟೆಂಡರ್‌ ಆಹ್ವಾನಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ .7 ಕೋಟಿ ವೆಚ್ಚದಂತೆ 28 ಕ್ಷೇತ್ರಗಳಿಗೂ ಊಟ ಪೂರೈಕೆಗೆ ಟೆಂಡರ್‌ ಕರೆದಿದೆ.

ಬೆಂಗಳೂರು(ಜೂ.20): ಉದ್ಯಾನನಗರಿ ಜನತೆಗೆ ಕಡಿಮೆ ದರದಲ್ಲಿ ಊಟ-ತಿಂಡಿ ಒದಗಿಸಲು ಸರ್ಕಾರ ಜಾರಿಗೆ ತರುತ್ತಿರುವ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟೀನ್‌' ಯೋಜನೆಯಡಿ ಅಡುಗೆ ಸಿದ್ಧಪಡಿಸಿ ಪೂರೈಸಲು ಬಿಬಿಎಂಪಿ ಟೆಂಡರ್‌ ಆಹ್ವಾನಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ .7 ಕೋಟಿ ವೆಚ್ಚದಂತೆ 28 ಕ್ಷೇತ್ರಗಳಿಗೂ ಊಟ ಪೂರೈಕೆಗೆ ಟೆಂಡರ್‌ ಕರೆದಿದೆ.

ಜೂನ್‌ 17ರಂದು ಟೆಂಡರ್‌ ಆಹ್ವಾನಿಸಿದ್ದು, ಟೆಂಡರ್‌ ಪ್ರಕ್ರಿಯೆ ಎಲ್ಲಾ ಪೂರ್ಣಗೊಂಡು ಅರ್ಹ ಗುತ್ತಿಗೆದಾರರೊಂದಿಗೆ ಜುಲೈ 19ರಂದು ಇಂದಿರಾ ಕ್ಯಾಂಟೀನ್‌ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಟೆಂಡರ್‌ ದಾಖಲೆಗಳಲ್ಲಿ ಆಹಾರ ಪೂರೈಸುವವರಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿದ್ದು, ಆಹಾರ ಸುರಕ್ಷತೆ ಕಾಯ್ದೆ -2006 ರಡಿ ಸುರಕ್ಷಿತ ಆಹಾರ ಪದಾರ್ಥವನ್ನು ಮಾತ್ರ ಪೂರೈಕೆ ಮಾಡಬೇಕು. ಆಹಾರಕ್ಕೆ ಕಡ್ಡಾಯವಾಗಿ ಬ್ರ್ಯಾಂಡೆಡ್‌ ಅಡುಗೆ ಎಣ್ಣೆ ಹಾಗೂ ಆಹಾರ ಪದಾರ್ಥಗಳನ್ನೇ ಬಳಕೆ ಮಾಡಬೇಕು. ಆಹಾರ ಸಿದ್ಧಪಡಿಸುವ ಹಾಗೂ ಪೂರೈಕೆ ಮಾಡುವ ಸಿಬ್ಬಂದಿ ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಪ್ರತಿ ಕ್ಯಾಂಟೀನ್‌ನಲ್ಲಿ ಪ್ರತಿ ಅವಧಿಗೆ 300 ಮಂದಿಗೆ ಊಟ, ತಿಂಡಿ ಪೂರೈಸಬೇಕು. ಅಗತ್ಯಬಿದ್ದರೆ ಈ ಪ್ರಮಾಣವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಪಾಲಿಕೆಗೆ ಅಧಿಕಾರವಿದೆ. ಹೀಗಾಗಿ ಹೆಚ್ಚುವರಿ ಊಟ ತಯಾರಿಸಲೂ ಸಹ ಗುತ್ತಿಗೆದಾರರು ಸಿದ್ಧವಿರಬೇಕು. ತಪ್ಪಿದರೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

ಇಂದಿರಾ ಕ್ಯಾಂಟಿನ್‌ನಲ್ಲಿ ಬೆಳಗಿನ ಉಪಾಹಾರ ಬೆಳಗ್ಗೆ 7.30ರಿಂದ 10 ಗಂಟೆ, ಮಧ್ಯಾಹ್ನದ ಊಟ ಮಧ್ಯಾಹ್ನ 12.30ರಿಂದ 3, ರಾತ್ರಿ ಊಟ ಸಂಜೆ 7.30ರಿಂದ 9ರವರೆಗೆ ನೀಡಬೇಕು. ಹಾಗೂ ಪ್ರತಿ 7 ದಿನಗಳಲ್ಲೂ ಬೇರೆ ಬೇರೆ ಆಹಾರ ನೀಡಬೇಕು. ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಎರಡು ಬಗೆಯ ಮೆನು ಸಿದ್ಧಪಡಿಸಬೇಕು. ಗ್ರಾಹಕರು ಯಾವುದು ಬೇಕೊ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ಎರಡೂ ಆಹಾರವನ್ನು ಅರ್ಧರ್ಧ ಪಡೆದರೂ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ.

ಬೆಳಿಗ್ಗೆಯ ತಿಂಡಿಯ ಮೆನು

ಸೋಮವಾರ ಬೆಳಗ್ಗಿನ ಉಪಾಹಾರಕ್ಕೆ 3 ಇಡ್ಲಿ (150 ಗ್ರಾಂ) ಹಾಗೂ 100 ಗ್ರಾಂ ಚಟ್ನಿ ಹಾಗೂ ಪುಳಿಯೋಗರೆ (300 ಗ್ರಾಂ), ಪುದಿನಾ ಚಟ್ನಿ (75 ಗ್ರಾಂ) ನೀಡಬೇಕು. ಇದರಲ್ಲಿ ಎರಡೂ ಶೇ.50 ಪ್ರಮಾಣ ಸಿದ್ಧಪಡಿಸಿಕೊಂಡಿರಬೇಕು. ಗ್ರಾಹಕರು ಇಡ್ಲಿ ಅಥವಾ ಪುಳಿಯೋಗರೆ ಯಾವುದು ಕೇಳಿದರೆ ಅದನ್ನು ನೀಡಬೇಕು. ಒಂದು ವೇಳೆ ಇಡ್ಲಿ ಹಾಗೂ ಪುಳಿಯೋಗರೆ ಎರಡನ್ನೂ ಕೇಳಿದರೂ ಅರ್ಧರ್ಧ ನೀಡಬೇಕು. ಉಳಿದ 6 ದಿನಗಳೂ ಸಹ 3 ಇಡ್ಲಿ ಹಾಗೂ ತೆಂಗಿನಕಾಯಿ ಚಟ್ನಿ ಮಾಡಬೇಕು. 2ನೇ ಆಯ್ಕೆಯಾಗಿ ಮಂಗಳವಾರ ಖಾರಾಬಾತ್‌ (200 ಗ್ರಾಂ), ಬುಧವಾರ ಪೊಂಗಲ್‌ (225 ಗ್ರಾಂ), ಗುರುವಾರ ರವಾ ಕಿಚಡಿ (200 ಗ್ರಾಂ), ಶುಕ್ರವಾರ ಚಿತ್ರಾನ್ನ (225 ಗ್ರಾಂ), ಶನಿವಾರ ವಾಂಗಿಬಾತ್‌ (225 ಗ್ರಾಂ), ಭಾನುವಾರ ಖಾರಾಬಾತ್‌ (150 ಗ್ರಾಂ) ಹಾಗೂ ಕೇಸರಿಬಾತ್‌ (75 ಗ್ರಾಂ) ನೀಡಬೇಕು. ಇದಕ್ಕೆ ಪ್ರತಿ ದಿನ ಪುದಿನಾ ಚಟ್ನಿ, ತೆಂಗಿನಕಾಯಿ ಚಟ್ನಿ, ಟಮೊಟೊ ಗೊಜ್ಜು, ಕೊತ್ತಂಬರಿ ಚಟ್ನಿ ದಿನಕ್ಕೊಂದು ನೀಡಬೇಕು.

ಮಧ್ಯಾಹ್ನ, ರಾತ್ರಿ ಮೆನು

ನಿತ್ಯವೂ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಎರಡು ರೀತಿಯ ಊಟದ ಮೆನು ಸಿದ್ಧಪಡಿಸಬೇಕು. ಗ್ರಾಹಕರು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೊ ಅದನ್ನು ನೀಡಬೇಕು. ಒಂದು ವೇಳೆ ಎರಡನ್ನೂ ಅರ್ಧರ್ದ ಕೇಳಿದರೂ ನೀಡಬೇಕು. ಸೋಮವಾರದಿಂದ ಭಾನುವಾರದವರೆಗೆ ಪ್ರತಿ ದಿನ ಮಧ್ಯಾಹ್ನ ಹಾಗೂ ರಾತ್ರಿ ಮೊದಲ ಆಯ್ಕೆಯಾಗಿ ಅನ್ನ (300 ಗ್ರಾಂ), ತರಕಾರಿ ಸಾಂಬಾರ್‌ (150 ಗ್ರಾಂ), ಮೊಸರನ್ನ (100 ಗ್ರಾಂ), ಚಟ್ನಿ ನೀಡಬೇಕು. 2ನೇ ಆಯ್ಕೆಯಾಗಿ ಸೋಮವಾರ ಟಮಟೋಬಾತ್‌ (300 ಗ್ರಾಂ), ಮೊಸರನ್ನ (100 ಗ್ರಾಂ), ಮಂಗಳವಾರ ಕಾಯಿ ಸಾಸಿವೆ ಚಿತ್ರಾನ್ನ (300 ಗ್ರಾಂ), 100 ಗ್ರಾಂ ಮೊಸರನ್ನ, ಬುಧವಾರ ವಾಂಗೀಬಾತ್‌ (300 ಗ್ರಾಂ), ಮೊಸರನ್ನ (100 ಗ್ರಾಂ), ಗುರುವಾರ ಬಿಸಿಬೇಳೆ ಬಾತ್‌ (300 ಗ್ರಾಂ), ಮೊಸರನ್ನ (100 ಗ್ರಾಂ), ಶುಕ್ರವಾರ ಮೆಂತ್ಯೆಪಲಾವ್‌ (300 ಗ್ರಾಂ), 100 ಗ್ರಾಂ ಮೊಸರನ್ನ, ಶನಿವಾರ ಪುಳಿಯೋಗರೆ (300 ಗ್ರಾಂ), 100 ಗ್ರಾಂ ಮೊಸರನ್ನ, ಭಾನುವಾರ ದರ್ಶಿನಿ ಫಲಾವ್‌ (300 ಗ್ರಾಂ), ಮೊಸರನ್ನ (100 ಗ್ರಾಂ) ನೀಡಬೇಕು.