ಬೆಂಗಳೂರು :  ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರದಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಅವರ ಸೇವೆ ರಾಜ್ಯಕ್ಕೆ ಅನಿವಾರ್ಯ. ಹೀಗಾಗಿ ರಾಜ್ಯ ಸರ್ಕಾರವು ಸದಾನಂದಗೌಡರ ನೇತೃತ್ವದಲ್ಲೇ ಮೇಕೆದಾಟು ವಿಚಾರದಲ್ಲಿ ಮುನ್ನಡೆಯಲಿದೆ ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಸಂಸತ್‌ನಲ್ಲಿ ತಮಿಳುನಾಡು ಸಂಸದರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರ ನೇತೃತ್ವದಲ್ಲೇ ರಾಜ್ಯದ ಸಂಸದರೆಲ್ಲಾ ಹೋಗಿ ಸಂಸತ್‌ನಲ್ಲಿ ಪ್ರತಿಭಟನೆ ನಡೆಸಿದ್ದೆವು. ಈ ಬಗ್ಗೆ ಸದಾನಂದಗೌಡರ ನಿವಾಸದಲ್ಲೇ ನಾವು ಸಭೆಗಳನ್ನು ನಡೆಸಿದ್ದೆವು. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಈವರೆಗೂ ಸದಾನಂದಗೌಡರು ಸಾಕಷ್ಟುಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೆ, ಇದೀಗ ಎರಡನೇ ಅವಧಿಗೂ ಕೇಂದ್ರ ಸಚಿವರಾಗಿ ಡಿ.ವಿ. ಸದಾನಂದಗೌಡ ನೇಮಕಗೊಂಡಿದ್ದಾರೆ. ಹೀಗಾಗಿ ಮೇಕೆದಾಟು ವಿಚಾರದಲ್ಲಿ ಡಿ.ವಿ.ಸದಾನಂದಗೌಡರ ನೇತೃತ್ವದಲ್ಲೇ ರಾಜ್ಯ ಸರ್ಕಾರ ಮುಂದಕ್ಕೆ ಹೋಗುತ್ತಿದೆ. ಸದಾನಂದಗೌಡರು ಯಾವಾಗ ಕರೆ ನೀಡುತ್ತಾರೋ ಆಗ ನಾನು ಹಾಗೂ ನಮ್ಮ ತಂಡ ಹೋಗಿ ಸದಾನಂದಗೌಡರನ್ನು ಭೇಟಿ ಮಾಡುತ್ತೇವೆ. ಡಿ.ವಿ. ಸದಾನಂದಗೌಡರ ನಾಯಕತ್ವದಲ್ಲೇ ನಾವು ಮುಂದಕ್ಕೆ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.