ಬೆಂಗಳೂರು :  ಕೇಂದ್ರ ಜಲ ಆಯೋಗ ಅನುಮತಿ ನೀಡಿರುವ ಮೇಕೆದಾಟು ಯೋಜನೆಗೆ ತಡೆಯಾಜ್ಞೆ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. 

ಈ ಬಗ್ಗೆ ಸೂಕ್ತ ಹಾಗೂ ಎಚ್ಚರದ ಕಾನೂನು ಹೋರಾಟ ಮಾಡಲು, ಯೋಜನೆಯಿಂದ ಉಭಯ ರಾಜ್ಯಗಳಿಗೆ ಆಗುವ ಅನುಕೂಲವನ್ನು ಕೇಂದ್ರ ಹಾಗೂ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯದ ಹಿತ ಕಾಯಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಸದ್ಯ ಕರ್ನಾಟಕ ಸರ್ಕಾರ ಕಾವೇರಿ ನದಿಯಿಂದ ಪೋಲಾಗುವ ನೀರನ್ನು ಹಿಡಿದಿಡುವ ಸಲುವಾಗಿ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ನಿರ್ಧಾರವನ್ನು ಕೈಗೊಂಡಿದೆ. ಇದರಿಂದ ಸಾವಿರಾರು ಎಕರೆ ಭೂಮಿ ಮುಳುಗಡೆಯಾಗಲಿದೆ. 

4,996 ಹೆಕ್ಟೇರ್‌ ಭೂಮಿ ಮುಳುಗಡೆ:  ಮೇಕೆದಾಟು ಯೋಜನೆಯಿಂದ ರಾಜ್ಯದ 4996 ಹೆಕ್ಟೇರ್‌ ಭೂಮಿ ಮುಳುಗಡೆ ಆಗುತ್ತದೆ. ಇದರಲ್ಲಿ 296 ಎಕರೆ ಕಂದಾಯ ಭೂಮಿ, 500-600 ಎಕರೆ ರೈತರ ಭೂಮಿ ಹಾಗೂ ಉಳಿದೆಲ್ಲವೂ ಅರಣ್ಯ ಭೂಮಿ ಇದೆ. ನೀರಾವರಿಗೆ ಒಂದು ಎಕರೆ ಕೂಡ ಉಳಿಯುವುದಿಲ್ಲ. ಕೇಂದ್ರ ಸರಕಾರ ಇದೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿಯೇ ಯೋಜನೆಗೆ ಅನುಮತಿ ನೀಡಿದೆ. 

ನ್ಯಾಯಾಲಯ, ಕೇಂದ್ರ ಜಲ ಆಯೋಗ ಕೊಟ್ಟಿರುವ ಆದೇಶ ಮತ್ತು ಅವಕಾಶದ ಪರಿಮಿತಿಯಲ್ಲೇ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅದಕ್ಕಿಂಥ ಒಂದಿಂಚೂ ಆಚೀಚೆ ಕದಲುವುದಿಲ್ಲ. ಡಿಪಿಆರ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾನೂನು ಮಿತಿಯಲ್ಲಿ ರಾಜ್ಯ ಹಿತ ಕಾಯಲಾಗುವುದು ಎಂದು ಹೇಳಿದರು.