ಮುಂಬೈ[ಮಾ.23]: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಸಾವಿರಾರು ಕೋಟಿ ರು. ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಜ್ರೋದ್ಯಮಿ ಮೇಹುಲ್‌ ಚೋಕ್ಸಿ, ಭಾರತಕ್ಕೆ ಗಡೀಪಾರಾಗುವುದ ನ್ನು ತಪ್ಪಿಸಿಕೊಳ್ಳಲು ಅನಾರೋಗ್ಯದ ತಂತ್ರ ಹೂಡಿದ್ದಾನೆ.

ವೈದ್ಯಕೀಯ ಸ್ಥಿತಿ ಹಾಗೂ ಅನಾರೋಗ್ಯದ ಕಾರಣದಿಂದಾಗಿ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತನ್ನ ವಕೀಲರ ಮೂಲಕ ಕೋರ್ಟ್‌ಗೆ ಸಲ್ಲಿಸಿರುವ ಹೊಸ ಅರ್ಜಿಯಲ್ಲಿ ಚೋಕ್ಸಿ ಹೇಳಿದ್ದಾನೆ. ತನ್ನ ಅರ್ಜಿಯ ಜೊತೆ ಆ್ಯಂಟಿಗುವಾ ವೈದ್ಯರೊಬ್ಬರಿಂದ ವೈದ್ಯಕೀಯ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು ಚೋಕ್ಸಿ ಸಲ್ಲಿಸಿದ್ದಾನೆ. ಅದರಲ್ಲಿ ಆಂಜಿಯೋಗ್ರಾಮ್‌, ಅಲ್ಟಾ್ರ ಸೌಂಡ್‌ ಪರೀಕ್ಷೆಗಳು, ಮಿದುಳು, ಕೀಲು ಸಂದುಗಳು, ಬೆನ್ನುಮೂಳೆಗಳ ಎಮ್‌ಆರ್‌ಐ ಸ್ಕಾ್ಯನ್‌, ರಕ್ತ ಪರೀಕ್ಷೆ ವರದಿಗಳು, ಎಕ್ಸರೇಗಳು, ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ವರದಿಗಳು ಸೇರಿವೆ.

ಆಂಟಿಗುವಾ ವೈದ್ಯರ ನಿರಂತರ ನಿಗಾದಲ್ಲಿಯೇ ಚೋಕ್ಸಿ ಇರಬೇಕಾಗಿದ್ದು, ಆರೋಗ್ಯ ಸ್ಥಿತಿ ಹದಗೆಡುವ ಕಾರಣದಿಂದ ಪ್ರಯಾಣ ಮಾಡದಂತೆ ಸೂಚಿಸಲಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ. ವಂಚನೆ ಪ್ರಕರಣ ಬೆಳಕಿಗೆ ಬರುವುದಕ್ಕೆ ಮುನ್ನವೇ ಚೋಕ್ಸಿ ಭಾರತದಿಂದ ಪರಾರಿಯಾಗಿ ಆಂಟಿಗುವಾ ಪೌರತ್ವ ಪಡೆದುಕೊಂಡಿದ್ದಾನೆ.