ಆ್ಯಂಟಿಗುವಾ/ನವದೆಹಲಿ[ಜೂ.26]: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚಿಸಿ ಕೆರಿಬಿಯನ್ ದ್ವೀಪದ ಆ್ಯಂಟಿಗುವಾ ದೇಶದ ಪೌರತ್ವ ಪಡೆದು, ಅಲ್ಲೇ ನೆಲೆಯೂರಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಭಾರಿ ಹಿನ್ನಡೆಯಾಗಿದೆ. ಚೋಕ್ಸಿ ತಮ್ಮ ದೇಶದಲ್ಲಿ ನಡೆಸುತ್ತಿರುವ ಕಾನೂನು ಹೋರಾಟಗಳೆಲ್ಲಾ ಮುಗಿಯುತ್ತಿದ್ದಂತೆ ಆತನ ಪೌರತ್ವ ರದ್ದುಗೊಳಿಸಿ, ಭಾರತಕ್ಕೆ ಗಡೀಪಾರು ಮಾಡುವುದಾಗಿ ಸ್ವತಃ ಆ್ಯಂಟಿಗುವಾ ಪ್ರಧಾನಮಂತ್ರಿ ಗ್ಯಾಸ್ಟನ್ ಬ್ರೌನ್ ತಿಳಿಸಿದ್ದಾರೆ. ಇದರಿಂದಾಗಿ ಚೋಕ್ಸಿ ಭಾರತಕ್ಕೆ ಗಡೀಪಾರಾಗುವುದು ಪಕ್ಕಾ ಆಗಿದೆ.

‘ಚೋಕ್ಸಿಯ ಪೌರತ್ವ ರದ್ದುಗೊಳಿಸಿ, ಭಾರತಕ್ಕೆ ಗಡೀಪಾರು ಮಾಡಲಾಗುವುದು. ಆದರೆ ಅದಕ್ಕೂ ವಿಧಾನವಿದೆ. ಕ್ರಿಮಿನಲ್‌ಗಳಿಗೆ ಅದರಲ್ಲೂ ಹಣಕಾಸು ಅಪರಾಧಗಳಲ್ಲಿ ಭಾಗಿಯಾದವರಿಗೆ ನಾವು ಸುರಕ್ಷಿತ ನೆಲೆಯನ್ನು ನೀಡಲು ಪ್ರಯತ್ನಿಸುತ್ತಿಲ್ಲ. ನಾವು ಕೆಲವೊಂದು ಪ್ರಕ್ರಿಯೆ ಅವಕಾಶಗಳನ್ನು ನೀಡಬೇಕಾಗುತ್ತದೆ. ಚೋಕ್ಸಿಯ ಪ್ರಕರಣ ನ್ಯಾಯಾಲಯದ ಮುಂದೆ ಇದೆ. ಕ್ರಿಮಿನಲ್‌ಗಳಿಗೂ ಮೂಲ ಭೂತ ಹಕ್ಕು ಎಂಬುದು ಇದೆ. ಹೀಗಾಗಿ ಕೋರ್ಟಿಗೆ ಹೋಗಿ, ತನ್ನನ್ನು ಸಮರ್ಥಿಸಿಕೊಳ್ಳುವ ಹಕ್ಕನ್ನು ಚೋಕ್ಸಿ ಹೊಂದಿದ್ದಾನೆ ಎಂಬುದನ್ನು ಭಾರತಕ್ಕೂ ತಿಳಿಸಿದ್ದೇವೆ. ಆದರೆ ಒಂದು ಭರವಸೆಯನ್ನಂತೂ ನೀಡುತ್ತೇನೆ. ಚೋಕ್ಸಿ ಮುಂದಿರುವ ಎಲ್ಲ ಕಾನೂನು ಅವಕಾಶಗಳು ಮುಕ್ತಾಯಗೊಂಡ ಬಳಿಕ ಆತನನ್ನು ಭಾರತಕ್ಕೆ ಗಡೀಪಾರು ಮಾಡುತ್ತೇವೆ’ ಎಂದು ಪತ್ರಿಕೆಯೊಂದಕ್ಕೆ ಗ್ಯಾಸ್ಟನ್ ತಿಳಿಸಿದ್ದಾರೆ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚಿಸಿದ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಹಾಗೂ ಆತನ ಬಂಧು ನೀರವ್ ಮೋದಿ ಪ್ರಮುಖ ಆರೋಪಿಗಳಾಗಿದ್ದಾರೆ. ಈಗಾಗಲೇ ನೀರವ್ ಮೋದಿ ಬ್ರಿಟನ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಹಗರಣ ಬೆಳಕಿಗೆ ಬರುವ ಮುನ್ನವೇ ಮೆಹುಲ್ ಚೋಕ್ಸಿ ಆ್ಯಂಟಿಗುವಾ ಪೌರತ್ವ ಪಡೆದುಕೊಂಡಿದ್ದ. ರಾಷ್ಟ್ರೀಯ ಅಭಿವೃದ್ಧಿ ನಿಧಿಯಲ್ಲಿ 70 ಲಕ್ಷ ರು. ಹೂಡಿಕೆ ಮಾಡಿದವರಿಗೆ ‘ಹೂಡಿಕೆ ಕಾರ್ಯಕ್ರಮದಡಿ ಪೌರತ್ವ’ ಯೋಜನೆಯಡಿ ಆ್ಯಂಟಿಗುವಾ ನಾಗರಿಕತ್ವ ನೀಡುತ್ತದೆ. ಅದರಂತೆ 2017ರ ನವೆಂಬರ್‌ನಲ್ಲೇ ಆತ ಪೌರತ್ವ ಪಡೆದುಕೊಂಡಿದ್ದಾನೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಚೋಕ್ಸಿ ಒಬ್ಬನೇ 7080.86 ಕೋಟಿ ರು. ವಂಚಿಸಿದ್ದಾನೆ.

ಸದ್ಯ ಆ್ಯಂಟಿಗುವಾದಲ್ಲೇ ಇರುವ ಚೋಕ್ಸಿ, ‘ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ನಾನು ಭಾರತವನ್ನು ಬಿಟ್ಟು ಹೊಂದಿಲ್ಲ. ವೈದ್ಯಕೀಯ ಚಿಕಿತ್ಸೆಗಾಗಿ ಆಗಮಿಸಿದ್ದೇನೆ. ದೈಹಿಕವಾಗಿ ಸಮರ್ಥ ಎಂದು ವೈದ್ಯರು ಹೇಳಿದ ಬಳಿಕ ಭಾರತಕ್ಕೆ ಬರುತ್ತೇನೆ’ ಎಂದು ಬಾಂಬೆ ಹೈಕೋರ್ಟ್‌ಗೆ ಇತ್ತೀಚೆಗೆ ವಕೀಲರ ಮೂಲಕ ತಿಳಿಸಿದ್ದ. ಚೋಕ್ಸಿಗೆ ಅನಾರೋಗ್ಯವಿದ್ದರೆ ಆತನನ್ನು ಭಾರತಕ್ಕೆ ಕರೆತರಲು ಏರ್ ಆ್ಯಂಬುಲೆನ್ಸ್ ಹಾಗೂ ಪರಿಣತ ವೈದ್ಯರ ತಂಡವನ್ನು ಕಳುಹಿಸಿಕೊಡುತ್ತೇವೆ. ಆದರೆ ಆತ ಹೇಳುತ್ತಿರುವುದು ಸುಳ್ಳು ಎಂದು ಜಾರಿ ನಿರ್ದೇಶನಾಲಯ ಕೂಡ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿತ್ತು.