ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಕಳಚಲು ಪಿಡಿಪಿಯೇ ನೇರ ಕಾರಣ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಹೇಳಿಕೆ ವಿರುದ್ಧ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಾಬೂಬಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಭಾನುವಾರ ಸರಣಿ ಟ್ವೀಟ್‌ ಮಾಡಿರು ಮುಫ್ತಿ, ನಮ್ಮ ಮಾಜಿ ಮೈತ್ರಿ ಪಕ್ಷವಾದ ಬಿಜೆಪಿ ನಮ್ಮ ವಿರುದ್ಧ ತಪ್ಪು ಆರೋಪಗಳನ್ನು ಹೊರಿಸುತ್ತಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್‌, ಹಿರಿಯ ಬಿಜೆಪಿ ನಾಯಕ ರಾಜನಾಥ್‌ ಸಿಂಗ್‌ ಅವರ ಮಾರ್ಗ ದರ್ಶನದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡುವುದು ನಮ್ಮ ಉದ್ದೇಶವಾಗಿತ್ತು. 

ಆದರೆ, ಬಿಜೆಪಿ ತಾನು ನೀಡಿದ ವಾಗ್ದಾನವನ್ನೇ ಪಾಲಿಸಿಲ್ಲ. ಆದರೆ, ಇದೀಗ ಉಗ್ರರ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂದು ನಮ್ಮ ಬಗ್ಗೆಯೇ ಆರೋಪಿಸುತ್ತಿದ್ದಾರೆ, ಎಂದು ಬಿಜೆಪಿ ಅಧ್ಯಕ್ಷ ಶಾ ಅವರಿಗೆ ತಿರುಗೇಟು ನೀಡಿದ್ದಾರೆ. 

ಇತ್ತೀಚೆಗಷ್ಟೇ ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚಾಗಿದ್ದರೆ, ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿರುವ ಪಿಡಿಪಿ ಜತೆಗಿನ ಮೈತ್ರಿಯೇ ಕಾರಣ ಎಂದು ಮೆಹಾಬೂಬಾ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿ ಮುಖಂಡ ಚೌಧರಿ ಲಾಲ್‌ ಸಿಂಗ್‌ ಅವರು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಮೆಹಾಬೂಬಾ, ಜನರಲ್ಲಿ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಮೃದು ಧೋರಣೆ ಅವಶ್ಯಕವಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.