ದೇಶದಾದ್ಯಂತ ಮೆಡಿಕಲ್ ಸ್ಟೋರ್ಗಳು ಶುಕ್ರವಾರ ಬಂದ್ ಆಗಲಿವೆ. ಆನ್‌ಲೈನ್‌ ಮೂಲಕ ಔಷಧಗಳ ಖರೀದಿ ಹಾಗೂ ಮಾರಾಟಕ್ಕೆ (ಇ-ಫಾರ್ಮಸಿ) ಅವಕಾಶ ನೀಡುವುದನ್ನು ವಿರೋಧಿಸಿ ಆಲ್‌ ಇಂಡಿಯಾ ಆರ್ಗನೈಸೇಷನ್‌ ಆಫ್‌ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಬಂದ್ ಗೆ ಕರೆ ನೀಡಿದೆ. 

ಬೆಂಗಳೂರು : ಆನ್‌ಲೈನ್‌ ಮೂಲಕ ಔಷಧಗಳ ಖರೀದಿ ಹಾಗೂ ಮಾರಾಟಕ್ಕೆ (ಇ-ಫಾರ್ಮಸಿ) ಅವಕಾಶ ನೀಡುವುದನ್ನು ವಿರೋಧಿಸಿ ಆಲ್‌ ಇಂಡಿಯಾ ಆರ್ಗನೈಸೇಷನ್‌ ಆಫ್‌ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಸೆ. 28 ರಂದು ದೇಶಾದ್ಯಂತ ಔಷಧ ಮಳಿಗೆಗಳ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಔಷಧ ಮಳಿಗೆಗಳು ಶುಕ್ರವಾರ ಮುಚ್ಚಲ್ಪಡಲಿವೆ.

Add Asianetnews Kannada as a Preferred SourcegooglePreferred

ಶುಕ್ರವಾರದ ಔಷಧ ಮಳಿಗೆಗಳಿಗೆ ಬಂದ್‌ಗೆ ಬಹುತೇಕ ಸಂಘಟನೆಗಳು ಬೆಂಬಲ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ದಾಸ್ತಾನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ.

ಸುವರ್ಣ ಕರ್ನಾಟಕ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಅಸೋಸಿಯೇಷನ್‌ (ಸುವರ್ಣ ಕೆಸಿಡಿಎ) ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ ಎಂದು ಹೇಳಿದೆ. ಆದರೆ, ಕರ್ನಾಟಕ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಅಸೋಸಿಯೇಷನ್‌, ಔಷಧ ವ್ಯಾಪಾರಿಗಳ ಸಂಘ ಸೇರಿದಂತೆ ಬಹುತೇಕ ಪ್ರಮುಖ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಸೆ.28 ರಂದು ಔಷಧ ಮಳಿಗೆಗಳು ಬಹುತೇಕ ಬಂದ್‌ ಆಗಲಿವೆ ಎಂದು ಔಷಧ ವ್ಯಾಪಾರಿಗಳ ಸಂಘದ ರಾಜ್ಯಾದ್ಯಕ್ಷ ಆರ್‌. ರಘುನಾಥರೆಡ್ಡಿ ಮಾಹಿತಿ ನೀಡಿದ್ದಾರೆ.

ಔಷಧಗಳು ಜನರ ಆರೋಗ್ಯ ಕಾಪಾಡಲು ಇರುವುದೇ ಹೊರತು ಕೆಡಿಸಲು ಅಲ್ಲ. ಔಷಧ ವಿತರಣೆ ಹಾಗೂ ಸಂಗ್ರಹದಲ್ಲಿ ಅದರದ್ದೇ ಆದ ಕ್ರಮಗಳನ್ನು ಅನುಸರಿಸಬೇಕು. ಹೀಗಿರುವಾಗ ಪರವಾನಗಿ ಇಲ್ಲದೆಯೇ ಮನಸೋ ಇಚ್ಛೆ ರಿಯಾಯಿತಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಔಷಧ ವಿತರಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಬೆಂಬಲ ನೀಡಬಾರದು ಎಂದು ಒತ್ತಾಯಿಸಿ ಬಂದ್‌ ನಡೆಸುತ್ತಿದ್ದು ಬೆಂಗಳೂರಿನಲ್ಲಿ 6,500, ಕರ್ನಾಟಕದಲ್ಲಿ 24 ಸಾವಿರ ಸೇರಿದಂತೆ ದೇಶಾದ್ಯಂತ 6.5 ಲಕ್ಷ ಔಷಧ ಮಳಿಗೆಗಳನ್ನು ಸೆ.28 ರಂದು ಮುಚ್ಚಲಾಗುವುದು ಎಂದಿದ್ದಾರೆ.