ಭಾರತದ ಯೋಧರ ಶಿರಚ್ಛೇದನವನ್ನು ನಾವು ಮಾಡೇ ಇಲ್ಲ... ಕಾಶ್ಮೀರದ ತೊಡಕುಗಳನ್ನ ನಮ್ಮ ತಲೆಗೆ ಕಟ್ಟಲಾಗ್ತಿದೆ ಅಂತಾ ಪಾಕ್ ತನ್ನ ಮೊಂಡುವಾದವನ್ನ ಮುಂದುವರೆಸಿತ್ತು. ಆದ್ರೆ ಭಾರತೀಯ ಯೋಧರ ಶಿರಚ್ಛೇದನಕ್ಕೆ ಪಾಕ್ ಸೇನಾ ಮುಖ್ಯಸ್ಥರೇ ಆದೇಶಿಸಿದ್ದು ಎಂಬ ಕಟು ಸತ್ಯ ಹೊರಬಿದ್ದಿದೆ.
ನವದೆಹಲಿ: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯನ್ನು ದಾಟಿ, ಭಾರತದೊಳಗೆ ನುಸುಳಿ, ನಮ್ಮ ಯೋಧರ ಶಿರಚ್ಛೇದನ ಮಾಡಲು ಪಾಕಿಸ್ತಾನದಿಂದಲೇ ಅದರ ಸೈನಿಕರಿಗೆ ಆದೇಶಿಸಲಾಗಿತ್ತಂತೆ. ಈ ಆದೇಶವನ್ನು ನೀಡಿದ್ದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಎಂಬ ಸತ್ಯ ಹೊರಬಿದ್ದಿದೆ. ಆದ್ರೆ ಈ ಸತ್ಯವನ್ನ ಒಪ್ಪಿಕೊಳ್ಳದ ಪಾಕ್, ತಾನೂ ತಪ್ಪೇ ಮಾಡಿಲ್ಲ... ನಮ್ಮ ತಪ್ಪಿಗೆ ನಿಮ್ಮ ಬಳಿ ಪುರಾವೆ ಇದೆಯಾ ಅಂತಾ ಮೊಂಡುವಾದಕ್ಕಿಳಿದಿದೆ.
ಆದ್ರೆ ಏಪ್ರಿಲ್ 30ರಂದು ಪಾಕಿಸ್ತಾನದ ಹಾಜಿ ಪೀರ್'ನಲ್ಲಿರುವ ಸೇನಾ ನೆಲೆಗಳಿಗೆ, ಖಮರ್ ಜಾವೇದ ಬಜ್ವಾ ಭೇಟಿ ನೀಡಿದ್ದರು. ಪಾಕ್ ಸೇನೆಗೆ ಅವರೇ ಶಿರಚ್ಛೇಧನದ ಆದೇಶ ನೀಡಿದ್ದಾರೆಂದು ಗುಪ್ತಚರ ಮತ್ತು ಸೇನಾ ಮೂಲಗಳು ತಿಳಿಸಿವೆ. ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕಳೆದ ಏಪ್ರಿಲ್ 17ರಂದು ಪಾಕ್ ಸೈನಿಕರು ರಜೌರಿ ಮತ್ತು ಭಾರತೀಯ ಸೇನಾ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯರು ನಡೆಸಿದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ 10 ಸೈನಿಕರು ಬಲಿಯಾಗಿದ್ದು, ಇದಕ್ಕೆ ಪ್ರತೀಕಾರವಾಗಿ ಭಾರತದ ಮೇಲೆ ದಾಳಿ ನಡೆಸುವಂತೆ ಬಜ್ವಾ ಆದೇಶಿಸಿದ್ದರು ಎಂದು ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿದೆ.
ಒಟ್ಟಿನಲ್ಲಿ ದ್ವೇಷದ ದಳ್ಳುರಿಯಿಂದ ಪಾಕ್ ಮತ್ತೊಂದು ರಕ್ತ ಚರಿತ್ರೆ ಬರೆಯೋದಕ್ಕೆ ಬುನಾದಿ ಸೃಷ್ಟಿಸಿದೆ.
- ಧಾನ್ಯಶ್ರೀ, ನ್ಯೂಸ್ ಡೆಸ್ಕ್, ಸುವರ್ಣ ನ್ಯೂಸ್
