ಇಷ್ಟು ದಿನಗಳ ಕಾಲ ಬಾಲಿವುಡ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದ ಮೀ ಟೂ ಅಭಿಯಾನ ಇದೀಗ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೂ ತಟ್ಟಿದೆ. ಸಚಿವ ಎಂ.ಜೆ ಅಕ್ಬರ್ ವಿರುದ್ಧ ಪತ್ರಕರ್ತೆಯೋರ್ವರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.
ನವದೆಹಲಿ : ಇಷ್ಟು ದಿನಗಳ ಕಾಲ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದ ಮೀ ಟೂ ಅಭಿಯಾನ ಇದೀಗ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೂ ಕೂಡ ತಟ್ಟಿದೆ.
ಪತ್ರಕರ್ತೆಯೋರ್ವರು ಮಾಜಿ ಪತ್ರಕರ್ತ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಎಂ.ಜೆ ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.
1997ರಲ್ಲಿ ತಾವು ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಕ್ಬರ್ ಅವರು ತಮ್ಮ ಬಾಸ್ ಆಗಿದ್ದರು. ಈ ವೇಳೆ ಅವರು ತಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರು ಎಂದು ಪ್ರಿಯಾ ರಮಣಿ ಎನ್ನುವ ಪತ್ರಕರ್ತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ತಮಗೆ 23 ವರ್ಷ ವಯಸ್ಸಾಗಿತ್ತು. ಎಂ.ಜೆ ಅಕ್ಬರ್ ಅವರು 43 ವರ್ಷದವರಾಗಿದ್ದರು. ಸಂದರ್ಶನವೊಂದರ ಸಲುವಾಗಿ ಹೋಟೆಲ್ ಕೊಠಡಿಗೆ ಅವರು ಸಂಜೆ 7 ಗಂಟೆ ಸುಮಾರಿಗೆ ಆಗಮಿಸುವಂತೆ ಹೇಳಿದ್ದರು. ತಾವು ಅಲ್ಲಿಗೆ ತೆರಳಿದ್ದ ವೇಳೆ ತಮ್ಮ ಬಳಿ ಅನುಚಿತವಾಗಿ ನಡೆದುಕೊಂಡಿದ್ದರು ಎಂದು ತಮ್ಮ ಖಾತೆಯಲ್ಲಿ ಈ ವಿಚಾರವನ್ನು ರಮಣಿ ಹಂಚಿಕೊಂಡಿದ್ದಾರೆ.
ಅಂದು ಅತ್ಯಂತ ಕಡಿಮೆ ಅವಧಿಯ ಸಂದರ್ಶನವಿತ್ತು. ಆದರೆ ಹೆಚ್ಚು ಸಮಯ ಕಳೆದಿದ್ದರು. ಕುಡಿಯಲು ಕೂಡ ಅವರು ಆಫರ್ ಮಾಡಿದ್ದರು. ಅಲ್ಲದೇ ಬೆಡ್ ನಲ್ಲಿ ತಮ್ಮ ಪಕ್ಕವೇ ಕುಳಿತುಕೊಳ್ಳಲು ಕೂಡ ಹೇಳಿದ್ದರು.
ಆದರೆ ಅಂದು ತಾವು ಕಷ್ಟಪಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದು, ಇನ್ನೆಂದೂ ಅವರೊಂದಿಗೆ ಒಂಟಿಯಾಗಿ ಎಲ್ಲಿಗೂ ತೆರಳದಿರಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.
