ನವದೆಹಲಿ[ಆ.07]: ಮಾಜಿ ವಿದೇಶಾಂಗ ಸಚಿವೆ, ಮಮತಾಮಯಿ ಸುಷ್ಮಾ ಸ್ವರಾಜ್ ನಿನ್ನೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲುವಿಕೆ ಬಿಜೆಪಿ ಪಕ್ಷ ಹಾಗೂ ಭಾರತೀಯರಿಗೆ ತುಂಬಲಾರದ ನಷ್ಟವುಂಟು ಮಾಡಿದೆ. ಪ್ರಧಾನಿ ಮೋದಿ, ಅಡ್ವಾಣಿ ಸೇರಿದಂತೆ ಹಲವಾರು ಗಣ್ಯರು ಸುಷ್ಮಾ ಅಂತಿಮ ದರ್ಶನ ಪಡೆದಿದ್ದಾರೆ. ಸದ್ಯ MDH ಸಂಸ್ಥೆಯ ಸಿಇಒ 96 ವರ್ಷದ ಮಹಾಶಯ್ ಧರಂಪಾಲ್ ಗುಲಾಟಿ ಸುಷ್ಮಾ ಪಾರ್ಥೀವ ಶರೀರದೆದುರು ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಎಲ್ಲರನ್ನೂ ಭಾವುಕರನ್ನಾಗಿಸಿದೆ. 

ಇಂದು ಬುಧವಾರ ಮಧ್ಯಾಹ್ನ 12ರಿಂದ ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಸುಷ್ಮಾ ಪಾರ್ಥೀವ ಶರೀರದ ಅಂತಿಮ ದರ್ಶನ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ವಿದೇಶಾಂಗ ಸಚಿವೆಗೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ MDH ತಾತ, ಮಹಾಶಯ್ ಧರಂಪಾಲ್ ಗುಲಾಟಿ ಗದ್ಗದಿತರಾಗಿದ್ದಾರೆ. ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಸುಷ್ಮಾ ಮೃತದೇಹದೆದುರು ಕುಸಿದು ಕುಳಿತು ಕಂಬನಿ ಮಿಡಿದಿದ್ದಾರೆ. ಈ ವಿಡಿಯೋ ನೋಡುಗರನ್ನೂ ಭಾವುಕರನ್ನಾಗಿಸಿದೆ.

ಇನ್ನು ಸುಷ್ಮಾ ಅಂತಿಮ ದರ್ಶನ ಪಡೆಯಲು ಬಂದಿದ್ದ ಬಿಜೆಪಿ ಹಿರಿಯ ನಾಯಕ ಎಲ್. ಕೆ ಅಡ್ವಾಣಿ ಕೂಡಾ ಭಾವುಕರಾಗಿ ಕಂಬನಿ ಮಿಡಿದಿದ್ದಾರೆ. ಸುಷ್ಮಾ ಸ್ವರಾಜ್ ನಿಧನದಿಂದ ಬಿಜೆಪಿ ವಲಯದಲ್ಲಿ ಶೋಕ ಮಡುಗಟ್ಟಿದೆ.