ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ತೀವ್ರ ಲಾಬಿ ನಡೆಸಿದ್ದ ಬಬಲೇಶ್ವರ ಶಾಸಕ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಅವರಿಗೆ ಸಚಿವ ಸ್ಥಾನವೂ ಇಲ್ಲದಂತಾಗಿದೆ. ಇದರಿಂದ ಅಸಮಾಧಾನಗೊಂಡ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವತ್ತ ಚಿಂತನೆ ನಡೆಸಿದ್ದಾರೆ. 

ಬೆಂಗಳೂರು : ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ತೀವ್ರ ಲಾಬಿ ನಡೆಸಿದ್ದ ಬಬಲೇಶ್ವರ ಶಾಸಕ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಅವರಿಗೆ ಸಚಿವ ಸ್ಥಾನವೂ ಇಲ್ಲದಂತಾಗಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಎಂ.ಬಿ. ಪಾಟೀಲ್‌ ಡಿಸಿಎಂ ಹುದ್ದೆಯತ್ತ ಕಣ್ಣಿಟ್ಟಿದ್ದರು. ಆದರೆ, ಜಿಲ್ಲಾ ರಾಜಕಾರಣ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ನಾಯಕತ್ವವು ಅವರ ಸಚಿವ ಸ್ಥಾನಕ್ಕೆ ಮುಳುವಾಗಿ ಪರಿಣಮಿಸಿತು. ಬಸವನ ಬಾಗೇವಾಡಿ ಶಾಸಕ ಹಾಗೂ ನೂತನ ಸಚಿವ ಶಿವನಾಂದ ಪಾಟೀಲ್‌ ಅವರು ಎಂ.ಬಿ.ಪಾಟೀಲ್‌ಗೆ ಸಚಿವ ಸ್ಥಾನ ನೀಡಿದರೆ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದ್ದರು.

ಲಿಂಗಾಯತ ಧರ್ಮದ ಹೋರಾಟವೂ ಸಹ ಕಾಂಗ್ರೆಸ್‌ಗೆ ಯಾವುದೇ ಲಾಭ ತಂದುಕೊಡಲಿಲ್ಲ. ಜತೆಗೆ ಹಾಲಿ ಸಚಿವರೂ ಸೋಲುವ ಪರಿಸ್ಥಿತಿ ಎದುರಾಯಿತು. ಈ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸ್ಥಾನಕ್ಕೂ ಪರಿಗಣಿಸಿಲ್ಲ ಎಂದು ಹೇಳಲಾಗಿದೆ. ಇನ್ನೊಂದು ಮೂಲದ ಪ್ರಕಾರ ಕಾಂಗ್ರೆಸ್‌ ಪಕ್ಷವು ಲಿಂಗಾಯತ ಮತಬ್ಯಾಂಕ್‌ ಓಲೈಕೆಗೆ ಎಂ.ಬಿ.ಪಾಟೀಲ್‌ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟಕಟ್ಟುವ ಚಿಂತನೆಯಲ್ಲಿದೆ ಎಂಬ ಮಾತೂ ಕೇಳಿಬಂದಿದೆ.