ನಾನು ಮನುಷ್ಯ, ನಂಗೆ ಬಾಲ ಇಲ್ಲ, ನಿಮಗೆ ಇರಬಹುದು!| ಶತಮೂರ್ಖ ಗೃಹ ಸಚಿವ ಎಂದ ಶೋಭಾ ಕರಂದ್ಲಾಜೆಗೆ ಗೃಹ ಸಚಿವ ಎಂಬಿಪಾ ತಿರುಗೇಟು

ಬೆಂಗಳೂರು[ಜೂ.17]: ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ಬೆಂಗಳೂರಿನಲ್ಲಿ ಶನಿವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಕುರಿತು ಆಡಿರುವ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತವೆ. ಬಾಲ ಇದ್ದವರು ಮಾತ್ರ ಈ ರೀತಿ ಮಾತನಾಡುತ್ತಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಹಾ ಮೇಧಾವಿಯಾಗಿರುವ ಶೋಭಾ ಕರಂದ್ಲಾಜೆ ಅವರು ಜಿಂದಾಲ್‌ಗೆ ಭೂಮಿ ಪರಭಾರೆ ವಿಷಯದಲ್ಲಿ ನನ್ನನ್ನು ಕುರಿತು ಮಾಡಿರುವ ಟೀಕೆಯನ್ನು ಗಮನಿಸಿದ್ದೇನೆ. ‘ಎಂ.ಬಿ.ಪಾಟೀಲರಿಗೆ ಕಾನೂನಿನ ಬಗ್ಗೆ ಜ್ಞಾನವಿಲ್ಲ. ಶತಮೂರ್ಖ ಗೃಹ ಮಂತ್ರಿಗಳು, ಮತ್ತೆ ಬಾಲ ಬಿಚ್ಚಿದ್ದಾರೆ’ ಎಂದು ಹೇಳಿದ್ದಾರೆ. ಬಹುಶಃ ನಿಮ್ಮಷ್ಟು ಅಪಾರ ಪಾಂಡಿತ್ಯ, ಮೇಧಾವಿತನ, ಸಭ್ಯತೆ ನನ್ನಲ್ಲಿ ಇಲ್ಲ. ಆದರೆ, ಮಂಗಗಳು ಸೇರಿದಂತೆ ಇತರೆ ಪ್ರಾಣಿಗಳಿಗೆ ಬಾಲ ಇರುತ್ತದೆ ಎಂದು ತಿಳಿದುಕೊಂಡಿದ್ದೇನೆ. ಆದರೆ, ನಾನು ಮನುಷ್ಯ. ನನಗೆ ಬಾಲ ಇಲ್ಲ. ನಿಮಗೆ ಬಾಲ ಇರಬಹುದೇನೋ ಎಂಬುದು ವಿಸ್ಮಯ. ಏಕೆಂದರೆ, ಬಾಲ ಇದ್ದವರು ಮಾತ್ರ ಈ ರೀತಿ ಮಾತನಾಡುತ್ತಾರೆ’ ಎಂದು ಖಾರವಾಗಿ ಉತ್ತರಿಸಿದ್ದಾರೆ

ಶೋಭಾ ಅವರ ಚರಿತ್ರೆ, ಸಂಸ್ಕೃತಿ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಹಾಗೆಯೇ, ನನ್ನ ಚರಿತ್ರೆ, ಸಂಸ್ಕೃತಿಯೂ ರಾಜ್ಯದ ಜನತೆಗೆ ತಿಳಿದ ವಿಷಯವಾಗಿದೆ. ಆದರೆ, ಹೆಣ್ಣು ಮಗಳಾದ ತಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ನೀವು ಬಳಸಿದ ಭಾಷೆ ನಿಮ್ಮ ಸಂಸ್ಕೃತಿಯನ್ನು ತೋರುತ್ತದೆ. ಜಿಂದಾಲ್‌ ಭೂಮಿ ಪರಭಾರೆ ಕುರಿತು ಸಂಪುಟ ಉಪ ಸಮಿತಿ ರಚನೆಯಾಗಿದ್ದು, ಅಲ್ಲಿ ಎಲ್ಲ ಸತ್ಯಾಸತ್ಯಗಳು ಹೊರಬರಲಿವೆ. ಅಲ್ಲಿಯವರೆಗೆ ತಾಳ್ಮೆ ಕಳೆದುಕೊಳ್ಳದೆ ಗೌರವದಿಂದ ವರ್ತಿಸಿರಿ ಎಂದು ಹೇಳಿದ್ದಾರೆ.