ಮೈಸೂರು[ಜೂ.18]: ಸಂಸದೆ ಶೋಭಾ ಕರಂದ್ಲಾಜೆ ಅವರ ‘ಶತಮೂರ್ಖ ಗೃಹ ಸಚಿವ’ ಹೇಳಿಕೆಗೆ ಗೃ ಹಸಚಿವ ಎಂ.ಬಿ.ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ಇರಕ್ಕ’ ಎಂದಿರುವ ಎಂ.ಬಿ.ಪಾಟೀಲ ಅವರು, ಹೆಣ್ಣು ಮಗಳು ಅಂತ ನಾನು ಯಾವ ಪದಗಳನ್ನೂ ಪ್ರಯೋಗಿಸುತ್ತಿಲ್ಲ. ನಾವು ಬಿಜಾಪುರದವರು, ನಮಗೆ ಬೇರೆ ಪದಗಳೇ ಗೊತ್ತು ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಂದಾಲ್‌ಗೆ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿ ಶೋಭಾ ಕರಂದ್ಲಾಜೆಯಂತಹ ಹೆಣ್ಣು ಮಕ್ಕಳ ಬಾಯಲ್ಲಿ ಆ ರೀತಿಯ ಪದ ಬರಬಾರದು. ಅವರ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿ ಜನರಿಗೆ ಗೊತ್ತಿದೆ. ಅದೇ ರೀತಿ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿ ಬಗ್ಗೆಯೂ ಜನರಿಗೆ ಗೊತ್ತಿದೆ ಎಂದರು.

ಶೋಭಾ ಕರಂದ್ಲಾಜೆ ದೊಡ್ಡ ಮೇಧಾವಿಗಳು. ಅವರು ತಾಳ್ಮೆಯಿಂದ ನಡೆದುಕೊಳ್ಳಬೇಕು. ಜಿಂದಾಲ್‌ ವಿಚಾರದಲ್ಲಿ ಅವರಿಗೆ ತಕರಾರಿದ್ದರೆ ಅದಕ್ಕಾಗಿಯೇ ಒಂದು ಸದನ ಉಪ ಸಮಿತಿ ರಚಿಸಲಾಗಿದ್ದು, ಅಲ್ಲಿ ಹೋಗಿ ಮಾತನಾಡಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.