Asianet Suvarna News Asianet Suvarna News

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಿಕೆಶಿಗೆ ಅಡ್ಡಿಯಾದವರು ಯಾರು ?

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಸಂಬಂಧಿಸಿದಂತೆ ರಾಜಧಾನಿ ದೆಹಲಿಯಲ್ಲಿ ತೆರೆಮರೆ ಚಟುವಟಿಕೆಗಳು ಚುರುಕುಗೊಂಡಿದ್ದು, ಮೇ 8ರಂದು ವೇಣುಗೋಪಾಲ್ ಮತ್ತು ನಾಲ್ವರು ಸಹ ಉಸ್ತುವಾರಿ ಕಾರ್ಯದರ್ಶಿಗಳ ತಂಡ ರಾಜ್ಯಕ್ಕೆ ಆಗಮಿಸಿ, ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಲಿದೆ.

MB Patil is Final For KPCC President

ನವದೆಹಲಿ(ಮೇ.06): ಕಾಂಗ್ರೆಸ್​ನ ರಾಜ್ಯ ಉಸ್ತುವಾರಿಯಾಗಿ ಕೇರಳ ಮೂಲದ ಕೆ.ಸಿ. ವೇಣುಗೋಪಾಲ್ ಅವರನ್ನು ನೇಮಕ ಮಾಡುತ್ತಿದ್ದಂತೆಯೇ ಕೆಪಿಸಿಸಿ ನೂತನ ಸಾರಥಿ ನೇಮಕಾತಿ ಪ್ರಕ್ರಿಯೆಗೆ ಪಕ್ಷದ ವರಿಷ್ಠರು ವೇಗ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಸಂಬಂಧಿಸಿದಂತೆ ರಾಜಧಾನಿ ದೆಹಲಿಯಲ್ಲಿ ತೆರೆಮರೆ ಚಟುವಟಿಕೆಗಳು ಚುರುಕುಗೊಂಡಿದ್ದು, ಮೇ 8ರಂದು ವೇಣುಗೋಪಾಲ್ ಮತ್ತು ನಾಲ್ವರು ಸಹ ಉಸ್ತುವಾರಿ ಕಾರ್ಯದರ್ಶಿಗಳ ತಂಡ ರಾಜ್ಯಕ್ಕೆ ಆಗಮಿಸಿ, ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಲಿದೆ.

ವೇಣುಗೋಪಾಲ್ ನೇತೃತ್ವದ ತಂಡ 3 ದಿನ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದು, ಚುನಾವಣೆ ರೂಪುರೇಷೆ, ಪಕ್ಷ ಸಂಘಟನೆ ಸೇರಿ ಅನೇಕ ವಿಷಯಗಳ ಬಗ್ಗೆ ಚಿಂತನ-ಮಂಥನ ನಡೆಸಲಿದೆ. 2018ರ ಚುನಾವಣೆ ದೃಷ್ಟಿಯಿಂದ ಕೆಪಿಸಿಸಿಗೆ ಹೊಸ ನಾಯಕನನ್ನು ಕಂಡುಕೊಳ್ಳುವುದು ಉಸ್ತುವಾರಿಗಳ ಮೊದಲ ಆದ್ಯತೆಯಾಗಲಿದೆ. ಈ ಬಗ್ಗೆ ಸಮಗ್ರ ವರದಿಯೊಂದನ್ನು ರಾಹುಲ್ ಗಾಂಧಿಗೆ ಮುಂದಿನ ವಾರ ಸಲ್ಲಿಸಲಿದೆ. ಎಐಸಿಸಿ ಮೂಲಗಳ ಪ್ರಕಾರ ಮುಂದಿನ ವಾರಾಂತ್ಯದಲ್ಲಿ ಕೆಪಿಸಿಸಿ ನೂತನ ಸಾರಥಿ ಯಾರೆಂಬುದು ಗೊತ್ತಾಗಲಿದೆ.

ಈ ಮಧ್ಯೆ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಬೆಳಗ್ಗೆ ರಾಹುಲ್​ರನ್ನು ಭೇಟಿ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಖರ್ಗೆ ಯಾರ ಪರ ಅಭಿಪ್ರಾಯ ಹೊಂದಿದ್ದಾರೆಂಬುದು ನಿಗೂಢವಾಗಿದ್ದರೂ, ಡಿ.ಕೆ.ಶಿವಕುಮಾರ್​ಗೆ ನಾಯಕತ್ವ ನೀಡುವ ಬಗ್ಗೆ ಅವರಿಗೆ ಒಪ್ಪಿಗೆ ಇಲ್ಲ ಎನ್ನಲಾಗುತ್ತಿದೆ.

ಪರಮೇಶ್ವರ್ ಪ್ರಯತ್ನ ಫಲ ಕೊಡುವುದೇ?

ಕೆಪಿಸಿಸಿ ಹಾಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಬದಲಾಯಿಸಲೇಬೇಕು ಎಂಬ ಸಂದೇಶ ಹೈಕಮಾಂಡ್ ತಲುಪಿ ಬಹುದಿನಗಳಾಗಿವೆ. ಬದಲಾವಣೆ ಅನಿವಾರ್ಯ ಎಂಬ ವಾಸ್ತವದ ಅರಿವು ಹೈಕಮಾಂಡ್​ಗೂ ಆದಂತಿದೆ. ಇದೇ ಕಾರಣಕ್ಕೆ ವೇಣುಗೋಪಾಲ್ ಮತ್ತು ತಂಡ ರಾಜ್ಯಕ್ಕೆ ಬರುತ್ತಿದ್ದು, ಪಕ್ಷದ ಮೂಡ್ ಹೇಗಿದೆ ಎಂಬ ಬಗ್ಗೆ ರಾಹುಲ್​ಗೆ ವರದಿ ಸಲ್ಲಿಸಲಿದೆ. ಚುನಾವಣೆ ಪೂರ್ಣಗೊಳ್ಳುವ ತನಕ ತಮ್ಮನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು ಎಂದು ಪರಮೇಶ್ವರ್ ದಿಲ್ಲಿ ನಾಯಕರ ಮನೆಗಳಿಗೆ ಸುತ್ತು ಹಾಕುತ್ತಿದ್ದರೂ, ಇದು ಫಲ ಕೊಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಡಿಕೆ ಶಿವಕುಮಾರ್​ಗೆ ವಿರೋಧಿಗಳೇ ಹೆಚ್ಚು

ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲುವುದೇ ಪಕ್ಷದ ಪ್ರಮುಖ ಗುರಿಯಾಗಿದ್ದರೆ ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ. ಶಿವಕುಮಾರ್​ಗೆ ಕೆಪಿಸಿಸಿ ಗಾದಿ ಒಲಿಯಲಿದೆ. ಸಂಪನ್ಮೂಲ ಕ್ರೋಢೀಕರಣ, ಪಕ್ಷ ಸಂಘಟನೆ ಹಾಗೂ ಆಕ್ರಮಣಕಾರಿ ಧೋರಣೆ ಮೂಲಕ ಹೆಚ್ಚೆಚ್ಚು ಮತ ಸೆಳೆಯುವ ಸಾಮರ್ಥ್ಯ ಡಿಕೆಶಿ ಅವರಲ್ಲಿದೆ ಎಂಬುದು ಹೈಕಮಾಂಡ್​ಗೆ ತಿಳಿದಿದೆ. ಅಲ್ಲದೆ, ರಾಹುಲ್ ಗಾಂಧಿ ಜತೆಗೂ ಡಿಕೆಶಿ ಉತ್ತಮ ಸಂಪರ್ಕ ಸಾಧಿಸಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್ ಮಟ್ಟದಲ್ಲಿ ಡಿಕೆಶಿಗೆ ವಿರೋಧಿಗಳೇ ಹೆಚ್ಚಿರುವುದರಿಂದ ಇದು ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕವೂ ವರಿಷ್ಠರಲ್ಲಿದೆ. ಡಿಕೆಶಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ತಮ್ಮನ್ನು ಹೈಜಾಕ್ ಮಾಡಿ ಅವರು ಪಕ್ಷದ ಮೇಲೆ ಹತೋಟಿ ಸಾಧಿಸಬಹುದು ಮತ್ತು ದಿಲ್ಲಿ ನಾಯಕರ ಮೇಲೆ ಪ್ರಭಾವ ಬೀರಬಲ್ಲರು ಎಂಬ ಆತಂಕ ಸಿಎಂ ಸಿದ್ದರಾಮಯ್ಯ ಅವರದ್ದು. ಹೀಗಾಗಿಯೇ, ಬೇರೆ ಯಾರನ್ನು ಆಯ್ಕೆ ಮಾಡಿದರೂ ಪರವಾಗಿಲ್ಲ, ಡಿಕೆಶಿ ಮಾತ್ರ ಬೇಡವೇ ಬೇಡ ಎಂದು ಸಿದ್ದರಾಮಯ್ಯ ವರಿಷ್ಠರ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಲ್ಲದೆ, ಕೇಂದ್ರದಲ್ಲಿ ಬಿಜೆಪಿ ಇರುವುದರಿಂದ ಚುನಾವಣೆ ಸಮಯದಲ್ಲಿ ಡಿಕೆಶಿ ಮೇಲಿನ ಪ್ರಕರಣಗಳಿಗೆ ಮರುಜೀವ ಬಂದರೆ ಏನು ಮಾಡುವುದು ಎಂಬ ಆತಂಕವೂ ವರಿಷ್ಠರಲ್ಲಿದೆ.

ಆಯ್ಕೆಯಾಗುವರೇ ಪಾಟೀಲ್?

ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಮತ್ತು ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಇಬ್ಬರೂ ಪಕ್ಷದ ಮಟ್ಟಿಗೆ ಸೂಕ್ತ ಅಭ್ಯರ್ಥಿಗಳೇ. ಆದರೆ, ಡಿಕೆಶಿ ಅವರಲ್ಲಿರುವ ಆಕ್ರಮಣಕಾರಿ ಧೋರಣೆ, ಪಕ್ಷ ಸಂಘಟನೆ ಸಾಮರ್ಥ್ಯ ಪಾಟೀಲ್​ರಲ್ಲಿ ಇದೆಯೇ? ಸ್ವಕ್ಷೇತ್ರದಲ್ಲಿ ಪಾಟೀಲ್ ಪ್ರಶ್ನಾತೀತ ನಾಯಕರಾಗಿದ್ದರೂ, ಡಿಕೆಶಿ ಅವರಂತೆ ರಾಜ್ಯವ್ಯಾಪಿ ಪ್ರಭಾವ ಹೊಂದಿದ್ದಾರೆಯೇ ಎಂಬ ಪ್ರಮುಖ ಪ್ರಶ್ನೆಗಳು ಅನೇಕರನ್ನು ಕಾಡುತ್ತಿದೆ. ಎಂ.ಬಿ. ಪಾಟೀಲ್ ಹೆಸರಿಗೆ ಸಿದ್ದರಾಮಯ್ಯ ಒಲವು ತೋರಿದ್ದರೂ, ಕರ್ನಾಟಕದಲ್ಲಿ ಮತ್ತೆ ಅಧಿಕಾರ ಸ್ಥಾಪಿಸಬೇಕು ಎಂದು ಪಣತೊಟ್ಟಿರುವ ರಾಹುಲ್ ಗಾಂಧಿ, ಗೆಲ್ಲುವ ಕುದುರೆಯನ್ನು ಪರಿಗಣಿಸುತ್ತಾರೋ ಅಥವಾ ತನ್ನ ಮಾತುಗಳಿಗೆ ತಲೆಯಾಡಿಸುವ ಅಭ್ಯರ್ಥಿ ಹೆಸರನ್ನು ಮುಂದಿಟ್ಟಿರುವ ಸಿಎಂ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.

ಕಣಕ್ಕಿಳಿದ ರಾಹುಲ್

ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗೆಟ್ಟಿರುವ ಕಾಂಗ್ರೆಸ್​ಗೆ ಕರ್ನಾಟಕದಲ್ಲಿ ಗೆಲ್ಲುವುದು ರಾಜಕೀಯವಾಗಿ ಬಹುಮುಖ್ಯ. 2018ರ ಚುನಾವಣೆ ಗೆದ್ದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಲೋಕಸಭೆಗೆ ಬರುವ ಸಂಸದರ ಸಂಖ್ಯೆ ಹೆಚ್ಚಬಹುದು ಎಂಬ ಲೆಕ್ಕಾಚಾರದ ಬಗ್ಗೆಯೂ ಚರ್ಚೆ ನಡೆದಿವೆ. ಹೀಗಾಗಿ ಚುನಾವಣೆ ವರ್ಷದಲ್ಲೇ ತಮ್ಮೊಂದಿಗೆ ಉತ್ತಮ ಸಂಪರ್ಕ ಸಾಧಿಸಿರುವ ಕೆ.ಸಿ. ವೇಣುಗೋಪಾಲ್​ರನ್ನು ಉಸ್ತುವಾರಿಯನ್ನಾಗಿ ಮಾಡಿ, ಪಕ್ಷದ ಆಗುಹೋಗುಗಳ ಬಗ್ಗೆ ಕಾಲಕಾಲಕ್ಕೆ ‘ವಾಸ್ತವ ಮತ್ತು ಪಕ್ಷಾತೀತ ವರದಿ’ಗಳನ್ನು ತರಿಸಿಕೊಳ್ಳಲು ರಾಹುಲ್ ಬಯಸಿದ್ದಾರೆ. ವೇಣುಗೋಪಾಲ್ ನೇಮಕದಿಂದ ರಾಜ್ಯ ಕಾಂಗ್ರೆಸ್ ನಾಯಕರನೇಕರಲ್ಲಿ ಹೊಸ ಉತ್ಸಾಹ ಬಂದಿದೆ. ದಿಗ್ವಿಜಯ್ ಸಿಂಗ್​ರನ್ನು ದೂರ ಸರಿಸಿದ್ದು, ಮೂಲ ಕಾಂಗ್ರೆಸಿಗರ ಖುಷಿಯನ್ನು ಮತ್ತಷ್ಟು ಹಿಗ್ಗಿಸಿದೆ.

Follow Us:
Download App:
  • android
  • ios