ಉತ್ತರ ಪ್ರದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ವಿಪಕ್ಷಗಳ ಮಾಹಾಮೈತ್ರಿ ಹಳಿ ತಪ್ಪುತ್ತಿದೆಯಾ? ಇಂತಹುದ್ದೊಂದು ಪ್ರಶ್ನೆ ಹುಟ್ಟು ಹಾಕಿದೆ ಬಿಎಸ್‌ಪಿ ನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಾರ್ಟಿಯ ನಾಯಕ ಅಖಿಲೇಶ್ ಯಾ್ದವ್ ನಡೆ. ಅಷ್ಟಕ್ಕೂ ಏನಾಗಿದೆ? ಇಲ್ಲಿದೆ ವಿವರ

ಮಂಗಳವಾರದಂದು ಉತ್ತರ ಪ್ರದೇಶದ ವಿಧಾನಸಭಾ ಅಧಿವೆಶನದ ಮೊದಲ ದಿನ ಬಿಸ್‌ಪಿ ನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಾರ್ಟಿಯ ನಾಯಕ ಅಖಿಲೇಶ್ ಯಾದವ್ ಸೆಂಟ್ರಲ್ ಹಾಲ್‌ನಲ್ಲಿ ಪಾರಂಪರಿಕವಾಗಿ ನಡೆಯುವ ಮೀಡಿಯಾ ಬ್ರೀಫಿಂಗ್ ತಪ್ಪಿಸಿಕೊಂಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಮಾತ್ರ ತಾನು ವಿಧಾನಸಭೆಯಲ್ಲಿ ಚರ್ಚಿಸಲಿರುವ ವಿಚಾರಗಳ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಇನ್ನು ಮೂರು ದಿನಗಳ ಹಿಂದೆ 3 ರಾಜ್ಯಗಳಲ್ಲಿ[ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ]ದಲ್ಲಿ ನಡೆದ ಕಾಂಗ್ರೆಸ್‌ನ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳದೆ ದೂರವುಳಿದಿದ್ದರು. ಈ ಬೆಳವಣಿಗೆಗಳನ್ನು ಗಮನಿಸಿದರೆ ಉತ್ತರಪ್ರದೇಶದಲ್ಲಿ ವಿಪಕ್ಷಗಳ ಮಹಾಮೈತ್ರಿ ವಿಫಲವಾಗುವ ಶಂಕೆ ಎದುರಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ನಡೆದ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾಯಾವತಿ ಹಾಗೂ ಅಖಿಲೇಶ್ ರವರ ಗೈರುಹಾಜರಿ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿತ್ತು. ಹೀಗಿದ್ದರೂ ಈ ರಾಜ್ಯಗಳಲ್ಲಿ ಬಿಸ್‌ಪಿ ಹಾಗೂ ಸಮಾಜವಾದಿ ಪಾರ್ಟಿ, ಕಾಂಗ್ರೆಸ್ ಗೆ ತನ್ನ ಬೆಂಬಲ ನೀಡಿದೆ ಎಂಬುವುದು ಗಮನಿಸಲೇಬೇಕಾದ ವಿಚಾರ. ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಅಲ್ಪಮತಗಳ ಅಂತರದಲ್ಲಿ ಸೋಲುವ ಲಕ್ಷಣಗಳು ಕಂಡು ಬಂದಿತ್ತು. ಆದರೆ ಎಸ್‌ಪಿ ತನ್ನ ಒಂದು ಹಾಗೂ ಬಿಎಸ್‌ಪಿ ತನ್ನ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ನೀಡುವ ಮೂಲಕ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿತ್ತು. ಇಷ್ಟೆಲ್ಲಾ ಆದರೂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಈ ಪಕ್ಷಗಳ ನಾಯಕರು ಗೈರಾಗಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇನ್ನು ಸಮಾಜವಾದಿ ಪಾರ್ಟಿ ಹಾಗೂ ಬಿಸ್‌ಪಿ ನಡುವೆ ಉತ್ತರ ಪ್ರದೆಶದ 80 ಲೋಕಸಭಾ ಕ್ಷೇತ್ರಗಳ ಹಂಚಿಕೆಯ ಫಾರ್ಮೂಲಾ ಬಹುತೇಕ ನಿರ್ಧಾರಗೊಂಡಿದೆ ಎನ್ನಲಾಗಿದೆ. ಇದರಲ್ಲಿ ಕಾಂಗ್ರೆಸ್ ಪಾಲುದಾರಿಕೆ ಬಹಳ ಕಡಿಮೆ ಎನ್ನಲಾಗಿದೆ. ಲಭ್ಯವಾದ ಮಾಹಿತಿ ಅನ್ವಯ ಚೌಧರಿ ಅಜಿತ್ ಸಿಂಗ್‌ರವರ ರಾಷ್ಟ್ರೀಯ ಲೋಕ್ ದಳವನ್ನು ಪಶ್ಚಿಮದ ಮೂರು ಕ್ಷೇತ್ರಗಳನ್ನು ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಾಂಗ್ರೆಸ್ ಗೆ ಅಮೇಟಿ ಹಾಗೂ ರಾಯ್‌ಬರೇಲಿ ನೀಡುವ ಸಾಧ್ಯತೆಗಳಿವೆ. ಇದನ್ನು ಹೊರತುಪಡಿಸಿ ಈ ಎರಡೂ ಪಕ್ಷಗಳು ಕಾಂಗ್ರೆಸ್‌ಗೆ ಬೇರಾವುದೇ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ನೀಡುವುದಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ, ಅಖಿಲೆಶ್ ಹಾಗೂ ಮಾಯಾವತಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವುದು ಸ್ಪಷ್ಟವಾಗಿದೆ. ಈ ಮೂಲಕ ಮಹಾಮೈತ್ರಿ ಮುರಿದು ಬೀಳುವ ಲಕ್ಷಣಗಳೂ ಕಂಡು ಬಂದಿದೆ.