ನವದೆಹಲಿ :  ದೇಶದಲ್ಲಿ ಲೋಕಸಭಾ ಚುನಾವಣೆ  ಸಮೀಪಿಸುತ್ತಿದೆ. ಇದೇ ವೇಳೆ ವಿಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿವೆ. 

ಇದೇ ಡಿಸೆಂಬರ್ 10 ರಂದು ವಿರೋಧ ಪಕ್ಷಗಳು ಒಗ್ಗೂಡಿ ದಿಲ್ಲಿಯಲ್ಲಿ  ಬೃಹತ್ ಸಮಾವೇಶ ನಡೆಸುತ್ತಿದ್ದು, ಈ ಸಮಾವೇಶಕ್ಕೆ ಬಿಎಸ್ ಪಿ ಮುಖಂಡೆ ಮಾಯಾವತಿ ಗೈರಾಗುವ ಸಾಧ್ಯತೆ ಇದೆ. ಇದರಿಂದ  ಮಾಯಾವತಿ ಮುಂದಿನ ಬೆಂಬಲ ಬಿಜೆಪಿಗೆ ಸಿಗಲಿದೆಯಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. 

ದೇಶದ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 11 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಫಲಿತಾಂಶ ಮುನ್ನಾ ದಿನವೇ ವಿಪಕ್ಷಗಳು ಬೃಹತ್ ರ್ಯಾಲಿ ನಡೆಸಲಿವೆ. 

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕರೆ ನೀಡಿರುವ ಈ ರ್ಯಾಲಿಯು 2019ರ ಚುನಾವಣಾ ತಯಾರಿಗೆ ಸಹಕಾರಿಯಾಗಲಿದೆ. ಆದರೆ ಮಾಯಾವತಿ ಗೈರಾಗುವ ಸಾಧ್ಯತೆ  ಇದೆ ಎಂದು ಹೇಳಲಾಗಿದ್ದು, ಅವರನ್ನು ಮನವೊಲಿಸುವ ಯತ್ನಗಳೂ ಕೂಡ ನಡೆದಿದೆ ಎನ್ನಲಾಗಿದೆ.

ಇನ್ನು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇದೇ 11 ರಂದು ಪ್ರಕಟವಾಗುತ್ತಿದ್ದು, ಚುನಾವಣಾ ಪಲಿತಾಂಶವನ್ನು ನೋಡಿ ಮಾಯಾವತಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹಿರಿಯ ವಿಪಕ್ಷ ಮುಖಂಡರೋರ್ವರು ಹೇಳಿದ್ದಾರೆ. 

ಈ ಸಮಾವೇಶವು ಕೇವಲ ಮುಂದಿನ ಚುನಾವಣಾ ರಣತಂತ್ರ ರೂಪಿಸುವುದು ಮಾತ್ರವಲ್ಲದೇ ಮಹಾಘಟಬಂಧನ್ ನಲ್ಲಿ ಯಾರು ಇರಲಿದ್ದಾರೆ ಎನ್ನುವುದನ್ನೂ ಕೂಡ ನಿರ್ಧರಿಸಲಿದೆ. 

ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ, ಸ್ಟಾಲಿನ್, ಅಖಿಲೇಶ್ ಯಾದವ್, ಎಚ್.ಡಿ.ಕುಮಾರಸ್ವಾಮಿ, ದೇವೇಗೌಡ ಅವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.