ಲಖನೌ: ಲೋಕಸಭೆ ಚುನಾವಣೆಗೆ ಮಹಾಮೈತ್ರಿಕೂಟ ರಚಿಸಲು ಉತ್ಸುಕವಾಗಿದ್ದ ಕಾಂಗ್ರೆಸ್ಸಿಗೆ ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರು ಸತತ ಮೂರನೇ ಹೊಡೆತ ನೀಡುವ ಸಾಧ್ಯತೆ ಕಂಡುಬರುತ್ತಿದೆ. ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಜತೆ ಮೈತ್ರಿ, ಮಧ್ಯಪ್ರದೇಶದಲ್ಲಿ 22 ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ಸಿಗೆ ಎರಡು ಶಾಕ್‌ಗಳನ್ನು ನೀಡಿದ್ದ ಮಾಯಾವತಿ, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ಸಿಗೆ ಕೈಕೊಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ಸಿನ ಬದಲಾಗಿ ಸಮಾಜವಾದಿ ಪಕ್ಷ ಹಾಗೂ ಕಮ್ಯುನಿಸ್ಟ್‌ ಪಕ್ಷಗಳ ಜತೆಗೂಡಿ ಚುನಾವಣೆ ಎದುರಿಸುವ ಕುರಿತು ಬಿಎಸ್ಪಿಯಲ್ಲಿ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಮಾಯಾವತಿ ಅವರು ಕಾಂಗ್ರೆಸ್‌ ಪಕ್ಷದ ನಾಯಕರ ಜತೆಗೂ ಮಾತುಕತೆಯಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ತೃತೀಯ ರಂಗದ ನಾಯಕರ ಜತೆಗೂ ಸಂಪರ್ಕದಲ್ಲಿದ್ದಾರೆ. ಈ ನಡುವೆ, ಏಕಾಂಗಿಯಾಗಿ ರಾಜಸ್ಥಾನ ವಿಧಾನಸಭೆ ಚುನಾವಣೆಗೂ ಹೋಗುವ ಆಲೋಚನೆಯೂ ಇದೆ ಎಂದು ಬಿಎಸ್ಪಿ ನಾಯಕರೊಬ್ಬರು ತಿಳಿಸಿದ್ದಾರೆ.

2013ರ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ 199 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಬಿಎಸ್ಪಿ, ಮೂರು ಸ್ಥಾನಗಳಲ್ಲಿ ಗೆದ್ದು ಶೇ.5ರಷ್ಟುಮತ ಗಳಿಸಿತ್ತು.