ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜೂನ್‌ನಲ್ಲಿ ಬಂಧಿತನಾದ ರೋನಾ ಜಾಕೋಬ್‌ ವಿಲ್ಸನ್‌ ಎಂಬಾತ ಮಾವೋವಾದಿ ಮುಖಂಡ ‘ಕಾಮ್ರೇಡ್‌ ಪ್ರಕಾಶ್‌’ ಎಂಬಾತನಿಗೆ ಬರೆದ ಇ- ಮೇಲ್‌ನಲ್ಲಿ , ‘ರಾಜೀವ್‌ ಗಾಂಧಿ ಹತ್ಯೆಯ ರೀತಿಯಲ್ಲೇ ‘ಮೋದಿ ರಾಜ್ಯ’ ಕೊನೆಗೊಳಿಸಲು ಉದ್ದೇಶಿಸಿರುವ ಸಂಗತಿಯನ್ನು ತಿಳಿದು ಬಂದಿದೆ. 

ಮುಂಬೈ : ‘ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಸಂಚು ರೂಪಿಸಿದ ಆರೋಪದ ಮೇಲೆ ಕೆಲ ದಿನಗಳ ಹಿಂದೆ ಹಾಗೂ ಜೂನ್‌ನಲ್ಲಿ ಬಂಧಿತರಾದ ಎಡಪಂಥೀಯ ಕಾರ್ಯಕರ್ತರು ನಕ್ಸಲ್‌ ಜೊತೆ ನಂಟು ಹೊಂದಿರುವ ಬಗ್ಗೆ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಅಲ್ಲದೇ ರಾಜೀವ್‌ ಗಾಂಧಿ ಹತ್ಯೆ ಘಟನೆಯ ರೀತಿಯಲ್ಲೇ, ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದನ್ನು ಬಂಧಿತನೊಬ್ಬ ನಕ್ಸಲ್‌ ಮುಖಂಡನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜೂನ್‌ನಲ್ಲಿ ಬಂಧಿತನಾದ ರೋನಾ ಜಾಕೋಬ್‌ ವಿಲ್ಸನ್‌ ಎಂಬಾತ ಮಾವೋವಾದಿ ಮುಖಂಡ ‘ಕಾಮ್ರೇಡ್‌ ಪ್ರಕಾಶ್‌’ ಎಂಬಾತನಿಗೆ ಬರೆದ ಇ- ಮೇಲ್‌ನಲ್ಲಿ , ‘ರಾಜೀವ್‌ ಗಾಂಧಿ ಹತ್ಯೆಯ ರೀತಿಯಲ್ಲೇ ‘ಮೋದಿ ರಾಜ್ಯ’ ಕೊನೆಗೊಳಿಸಲು ಉದ್ದೇಶಿಸಿರುವ ಸಂಗತಿಯನ್ನು ತಿಳಿಸಿದ್ದ’ ಎಂದು ಹೆಚ್ಚುವರಿ ಮಹಾ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಪರಮಬೀರ್‌ ಸಿಂಗ್‌ ಸುದ್ದಿಗಾರಿಗೆ ತಿಳಿಸಿದ್ದಾರೆ.

ಈ ಸಂಬಂಧ ಈಗ ಬಂಧಿತರಾದ ಎಡಪಂಥೀಯ ಕಾರ್ಯಕರ್ತರು ಹಾಗೂ ಭೂಗತ ನಕ್ಸಲರ ಮಧ್ಯೆ ವಿನಿಯಮವಾದ ಸಾವಿರಾರು ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

ರೋನಾ ಬರೆದ ಪತ್ರದಲ್ಲಿ ಹೀಗಿದೆ: ‘ಇಲ್ಲಿನ ಸದ್ಯದ ಪರಿಸ್ಥಿತಿಗೆ ಸಂಬಂಧಿಸಿದಂತೆ ನಾವು ನಿಮ್ಮ ಕೊನೆಯ ಪತ್ರವನ್ನು ಸ್ವೀಕರಿಸಿದ್ದೇವೆ. ಅರುಣ್‌ (ಫೆರೀರಾ) ವೆರ್ನೊನ್‌ (ಗೊನ್ಸಾಲ್ವೀಸ್‌) ಮತ್ತು ಇತರರು ಇತರರು ನಗರದ ಮುಂಚೂಣಿ ಹೋರಾಟದ ಬಗ್ಗೆ ಕಳವಳಗೊಂಡಿದ್ದಾರೆ’ ಎಂದು ಇ-ಮೇಲ್‌ನಲ್ಲಿ ರೋನಾ ವಿಲ್ಸನ್‌ ಹೇಳಿದ್ದಾನೆ.‘ಅಲ್ಲದೇ, ನಾಲ್ಕು ಲಕ್ಷ ಸುತ್ತುಗಳಷ್ಟು ಗ್ರೆನೇಡ್‌ ಲಾಂಚರ್‌ಗಳ ಪೂರೈಕೆಗೆ ವಾರ್ಷಿಕ 8 ಕೋಟಿ ರು. ಅಗತ್ಯವಿದೆ’ ಎಂಬ ಸ್ಫೋಟಕ ಸಂಗತಿಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಕಾಮ್ರೇಡ್‌ ಕಿಶನ್‌ ಮತ್ತು ಇತರ ಕೆಲವು ಕಾಮ್ರೇಡ್‌ಗಳು ಮೋದಿ ರಾಜ್‌ ಕೊನೆಗೊಳಿಸಲು ದೃಢವಾದ ಹೆಜ್ಜೆ ಇಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಜೀವ್‌ ಗಾಂಧಿ ಅವರ ಹತ್ಯೆಯ ಘಟನೆಯ ರೀತಿಯಲ್ಲೇ ಈ ಉದ್ದೇಶವನ್ನು ಈಡೇರಿಸಲು ನಾವು ಚಿಂತಿಸಿದ್ದೇವೆ. ಈ ಬಗ್ಗೆ ನಿಮ್ಮ ನಿರ್ಧಾರವನ್ನು ತಿಳಿಸಿ’ ಎಂದು ನಕ್ಸಲ್‌ ಮುಖಂಡ ಪ್ರಕಾಶ್‌ಗೆ ವಿಲ್ಸನ್‌ ಕೇಳಿಕೊಂಡಿದ್ದ.

‘ಬಂಧಿತ ಕಾರ್ಯಕರ್ತರ ನಡುವೆ ವಿನಿಮಯಗೊಂಡ ಕೆಲವು ಪತ್ರಗಳಲ್ಲಿ ಕೆಲವು ಗಮನ ಸೆಳೆಯುವ ‘ದೊಡ್ಡ ಕೃತ್ಯ’ ಎಸಗುವ ಬಗ್ಗೆ ಸಂಚು ರೂಪಿಸುವ ಬಗ್ಗೆಯೂ ಚರ್ಚೆ ನಡೆದಿತ್ತು. ಈ ಪತ್ರಗಳ ವಿನಿಮಯಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಜಿ.ಎನ್‌. ಸಾಯಿಬಾಬಾ ಅವರನ್ನು 2014ರಲ್ಲಿ ಬಂಧಿಸಲಾಗಿತ್ತು’ ಎಂದು ಹೆಚ್ಚುವರಿ ಪೊಲಿಸ್‌ ಮಹಾ ನಿರ್ದೇಶಕ ಪರಮಬೀರ್‌ ಸಿಂಗ್‌ ಮಾಹಿತಿ ನೀಡಿದರು.

ನಕ್ಸಲ್‌ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಜೂನ್‌ನಲ್ಲಿ ಈ ವಾರದ ಆರಂಭದಲ್ಲಿ ಎಡಪಂಥೀಯ ಕಾರ್ಯಕರ್ತರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿಬಂದಿರುವ ಟೀಕೆಗೆ ಉತ್ತರಿಸಿದ ಈ ಪೊಲೀಸ್‌ ಅಧಿಕಾರಿ,‘ ಭೂಗತ ನಕ್ಸಲರು ಹಾಗೂ ನಕ್ಸಲಿಯರ ಜೊತೆ ನಂಟು ಹೊಂದಿರುವ ಬಗ್ಗೆ ಖಚಿತ ಸುಳಿವು ದೊರೆತ ಬಳಿಕವೇ ಅವರನ್ನು ಬಂಧಿಸಲಾಗಿದೆ. ನಮ್ಮ ಬಳಿ ಇರುವ ಸಾಕ್ಷ್ಯಾಧಾರಗಳ ಪ್ರಕಾರ ಬಂಧಿತರಿಗೆ ನಕ್ಸಲ್‌ ನಂಟು ಇರುವುದು ಸ್ಪಷ್ಟವಾಗುತ್ತದೆ’ ಎಂದು ಸಮರ್ಥಿಸಿದರು.

‘ಪಾಸ್‌ವರ್ಡ್‌ ಇರುವ ಮೆಸೇಜ್‌ಗಳ ಮೂಲಕ ನಕ್ಸಲರು ಕೇಂದ್ರೀಯ ಸಮಿತಿ ಬಂಧಿತ ಎಡಪಂಥೀಯ ಮುಖಂಡರ ಜೊತೆ ಸಂಭಾಷಣೆ ನಡೆಸುತ್ತಿತ್ತು. ನಕ್ಸಲರು ಬಹುದೊಡ್ಡ ಸಂಚು ರೂಪಿಸಿರುವ ಸಂಗತಿ ನಮ್ಮ ತನಿಖೆಯಿಂದ ಬಹಿರಂಗಗೊಂಡಿದೆ. ಆರೋಪಿಗಳು ಗುರಿಯನ್ನು ಸಾಧಿಸಲು ನೆರವಾಗಿದ್ದರು. ಖಚಿತ ಸುಳಿವಿನ ಮೇರೆಗೆ ಏ.17ರಂದು ಆರು ಕಡೆಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಅದನ್ನು ಸೂಕ್ತ ಪಂಚನಾಮೆ ಮಾಡಲಾಗಿದೆ. ಮೇ 17ರಂದು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪರಮಬೀರ್‌ ಸಿಂಗ್‌ ಮಾಹಿತಿ ನೀಡಿದರು.

‘ನಮಗೆ ಸಿಕ್ಕಿರುವ ಸುಳಿವುಗಳ ಬಳಿಕವೇ ನಾವು ದಾಳಿ ನಡೆಸಿದೆವು. ಈ ಪತ್ರಗಳನ್ನು ವಿಶ್ಲೇಷಿಸಿದಾಗ ‘ಭೂಗತ ಮಾವೋವಾದಿಗಳು’ ಹಾಗೂ ‘ಬಹಿರಂಗ ಮಾವೋವಾದಿ’ಗಳ ನಡುವೆ ಸಂಬಂಧ ಇದ್ದುದು ದೃಢವಾಯಿತು’ ಎಂದು ಅವರು ಸ್ಪಷ್ಟಪಡಿಸಿದರು.

‘ಬಂಧಿತ ಆಪಾದಿತರು 35 ದೊಡ್ಡ ವಿವಿಗಳ ಜತೆ ಸಂಪರ್ಕ ಹೊಂದಿದ್ದರು. ಅಲ್ಲಿನ ವಿದ್ಯಾರ್ಥಿಗಳನ್ನು ತಮ್ಮ ಹೋರಾಟಕ್ಕೆ ನಿಯೋಜಿಸಿಕೊಂಡು ಹೋರಾಟ ಮುಂದುವರಿಸಲು ಸಂಚು ರೂಪಿಸಿದ್ದರು. ಈ ಸಂಚಿನ ಅರಿವಾಗಿ ಸುಮಾರು 1 ವಾರ ಕಾಲ ಈ ಹೋರಾಟಗಾರರ ಮೇಲೆ ನಿಗಾ ವಹಿಸಲಾಯಿತು. ಹೊಸ ಸಾಕ್ಷ್ಯ ಸಿಕ್ಕಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರಿಗೆ ಮನವರಿಕೆ ಮಾಡಿ ದಾಳಿ ನಡೆಸಲಾಯಿತು’ ಎಂದೂ ಪೊಲೀಸರು ಹೇಳಿದರು.