ಗುಂಟೂರು(ಡಿ.04): ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬ್ ಜನಪ್ರಿಯ ವೃದ್ಧೆ ಮಸ್ತಾನಮ್ಮ ವಿಧಿವಶರಾಗಿದ್ದಾರೆ. ತಮ್ಮ ಗ್ರಾಮೀಣ ಸೊಗಡಿನ ಚಿಕನ್ ಆಹಾರ ಶೈಲಿಯಿಂದಲೇ ಮಸ್ತಾನಮ್ಮ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು.

107 ವರ್ಷದ ಮಸ್ತಾನಮ್ಮ ತಮ್ಮ ಚಿಕನ್ ಕರ್ರಿ ಮುಂತಾದ ಮಾಂಸಾಹಾರಿ ಆಹಾರಗಳಿಂದ ಕೇವಲ 2 ವರ್ಷಗಳಲ್ಲಿ ವಿಶ್ವದಾದ್ಯಂತ ಸುಮಾರು 12 ಲಕ್ಷ ಅಭಿಮಾನಿಗಳನ್ನು ಗಳಿಸಿದ್ದರು. ಅಲ್ಲದೇ ವಿಶ್ವದ ಅತ್ಯಂತ ಹಿರಿಯ  ಯುಟ್ಯೂಬರ್ ಎಂಬ ಖ್ಯಾತಿಗೂ ಮಸ್ತಾನಮ್ಮ ಪಾತ್ರರಾಗಿದ್ದರು.

ತಮ್ಮ 11ನೇ ವಯಸ್ಸಿನಲ್ಲೇ ಮದುವೆಯಾಗಿ ತಮ್ಮ 21ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿದ್ದ ಮಸ್ತಾನಮ್ಮ, ಬಹಳ ಕಷ್ಟಪಟ್ಟು 5 ಮಕ್ಕಳನ್ನು ಸಾಕಿದ್ದರು. ಆದರೆ ಕಾಲರಾ ರೋಗಕ್ಕೆ ತುತ್ತಾಗಿ ಮಸ್ತಾನಮ್ಮ ಅವರ ಐವರು ಮಕ್ಕಳ ಪೈಕಿ ನಾಲ್ವರು ಅಸುನೀಗಿದ್ದರು.

ಮಸ್ತಾನಮ್ಮ ಬಹಳ ರುಚಿಕರ ಅಡುಗೆ ಮಾಡುತ್ತಿದ್ದು, ದೇಶೀಯ ಶೈಲಿಯ ಅವರ ಅಡುಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಮೊಮ್ಮಗ ಲಕ್ಷ್ಮಣ್ ಹಾಗೂ ಅವರ ಗೆಳೆಯ ಶ್ರೀನಾಥ್ ರೆಡ್ಡಿ ಸೇರಿ ಮಸ್ತಾನಮ್ಮ ಡುಗೆ ಮಾಡುವ ವಿಧಾನವನ್ನು ಯಟ್ಯೂಬ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು.

ನಂತರ ಇದು ಜನಪ್ರಿಯತೆ ಪಡೆಯುತ್ತಿದ್ದಂತೇ ಲಕ್ಷ್ಮಣ್ ಮಸ್ತಾನಮ್ಮ ಹೆಸರಲ್ಲೇ ಯುಟ್ಯೂಬ್ ಖಾತೆ ತೆರೆದು ಅದರಲ್ಲಿ ಮಸ್ತಾನಮ್ಮ ಅವರ ಚಿಕನ್ ಖಾದ್ಯಗಳ ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು.

ಹೀಗೆ ತಮ್ಮ ಅಡುಗೆ ಶೈಲಿಯಿಂದಲೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದ ಮಸ್ತಾನಮ್ಮ, ಇಂದು ನಿಧನರಾಗಿದ್ದು, ಪ್ರೀತಿಯ ಅಜ್ಜಿಯ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.