Asianet Suvarna News Asianet Suvarna News

3 ರು.ಗೆ ಸಿಗುತ್ತದೆ ಮಸಾಲೆ ದೋಸೆ!

ಇಲ್ಲಿ ಮಸಾಲಾ ದೋಸೆಯೊಂದಕ್ಕೆ ಕೇವಲ 3 ರೂಪಾಯಿ. ಹೊಟ್ಟೆ ತುಂಬಿಲ್ಲವೆಂದು ಇನ್ನೊಂದು ದೋಸೆ ಹಾಕಿಸಿಕೊಂಡರೆ ಕೊಡಬೇಕಾದದ್ದು ಕೇವಲ 5 ರೂಪಾಯಿ.

Masala Dosa For 3 Rupees In Koppal

ಕೊಪ್ಪಳ(ಆ.20): ಇಲ್ಲಿ ಮಸಾಲಾ ದೋಸೆಯೊಂದಕ್ಕೆ ಕೇವಲ 3 ರೂಪಾಯಿ. ಹೊಟ್ಟೆ ತುಂಬಿಲ್ಲವೆಂದು ಇನ್ನೊಂದು ದೋಸೆ ಹಾಕಿಸಿಕೊಂಡರೆ ಕೊಡಬೇಕಾದದ್ದು ಕೇವಲ 5 ರೂಪಾಯಿ.

ಹೌದು. ಇದು ಇಂದಿರಾ ಕ್ಯಾಂಟೀನ್‌'ಗೆ ಸಡ್ಡು ಹೊಡೆಯಲು ಯಾರೋ ಆರಂಭಿಸಿದ ನಮೋ ಕ್ಯಾಂಟೀನ್ ಅಲ್ಲ ಅಥವಾ ಅಪ್ಪಾಜಿ ಕ್ಯಾಂಟೀನ್‌'ನ ರೇಟ್ ಬೋರ್ಡ್ ಸಹ ಅಲ್ಲ. ಕೊಪ್ಪಳ ಜಿಲ್ಲೆಯ ಗಂಗಾವತಿಯ 1ನೇ ವಾರ್ಡಿನ ಪಾಂಡುರಂಗ ದೇವಸ್ಥಾನದ ಬಳಿ ಮೆಹಬೂಬಿ ಅವರ ತೆರೆದ ಹೋಟೆಲ್‌ನಲ್ಲಿ ನೀಡಬೇಕಾದ ಹಣ.

ಕಡಿಮೆ ಹಣವೆಂದು ಅವರೇನು ಗುಣಮಟ್ಟ ಅಥವಾ ದೋಸೆಯ ಗಾತ್ರದಲ್ಲಿ ರಾಜಿ ಮಾಡಿಕೊಂಡಿಲ್ಲ. ಬಹುತೇ ಕರಿಗೆ ಒಂದೇ ದೋಸೆಯಲ್ಲಿ ಹೊಟ್ಟೆ ತುಂಬುತ್ತದೆ, ಕೆಲವರಿಗೆ ಇನ್ನೊಂದು ಬೇಕಾಗುತ್ತದೆ. ಜೊತೆಗೆ ತೆಂಗಿನ ಕಾಯಿಯ ತಾಜಾ ಚಟ್ನಿಯನ್ನೂ ನೀಡುತ್ತಾರೆ. ಲಾಭದ ನಿರೀಕ್ಷೆ ಇಲ್ಲದೇ 10 ವರ್ಷಗಳಿಂದ ಇವರು ಮುಂಜಾನೆಯ ಹಸಿದ ಗ್ರಾಹಕರಿಗೆ ದೋಸೆ ಪೂರೈಸುತ್ತಿದ್ದಾರೆ. ಈ ದೋಸೆ ಅಂಗಡಿ ಮುಂಜಾನೆ 5.30ರಿಂದ 10ರವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ.

ದೋಸೆ ಮಾತ್ರ ಇಲ್ಲಿ ಸಿಗುವ ಆಹಾರ. 10 ಗಂಟೆಯ ಬಳಿಕ ಅವರು ಮತ್ತೆ ತಮ್ಮ ದಿನ ನಿತ್ಯದ ಕಾಯಕ (ಕೂಲಿ ಮತ್ತು ಹೊಲದ ಕೆಲಸ)ದತ್ತ ಮುಖ ಮಾಡುತ್ತಾರೆ. ತೆರೆದ ಅಂಗಡಿ ಆಗಿದ್ದರಿಂದ ಶುಚಿತ್ವದ ಸ್ವಲ್ಪ ಕೊರತೆ ಬಿಟ್ಟರೆ, ರುಚಿ, ಗುಣಮಟ್ಟದಲ್ಲಿ ಯಾವುದಕ್ಕೂ ಕೊರತೆ ಇಲ್ಲ ಎಂದು ಇಲ್ಲಿ ದೋಸೆ ತಿಂದವರೇ ಹೇಳುತ್ತಾರೆ. ಇಲ್ಲಿ ದೋಸೆ ತಿನ್ನಲು ಜನರ ಗುಂಪೇ ಸೇರಿರುತ್ತದೆ.

ಶುದ್ಧ ಮತ್ತು ತಾಜಾ:

ಪ್ರಾರಂಭದ ಮೊದಲ ದಿನವೇ ಇಂದಿರಾ ಕ್ಯಾಂಟೀನ್ ಕುರಿತು ಅಪಸ್ವರ ಎದ್ದಿದೆ. ಆದರೆ, ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮೆಹಬೂಬಿ ಅವರ ತೆರೆದ ಹೋಟೆಲ್ ಬಗ್ಗೆ ಇಂಥ ಒಂದೇ ಒಂದು ದೂರು ಇಲ್ಲ. ಇವರದು ತಾಜಾ ಮತ್ತು ಶುದ್ಧವಾಗಿರುವ ಆಹಾರ.

ಅನೇಕಾನೇಕ:

ಇಂಥ ಹೋಟೆಲ್‌ಗಳು ಒಂದೇ ಕಡೆ ಅಲ್ಲ, ಅನೇಕ ಕಡೆ ಇವೆ. ಕೊಪ್ಪಳ ನಗರದಲ್ಲಿಯೇ ದಿವಟರ್ ವೃತ್ತದಲ್ಲಿ 5ಕ್ಕೆ ಒಂದು ರಾಗಿ ದೋಸೆಯನ್ನು ನೀಡುತ್ತಾರೆ.

ಪ್ರೋತ್ಸಾಹಿಸಲಿ:

ಸರ್ಕಾರ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟ ನೀಡಲು ದೊಡ್ಡ- ದೊಡ್ಡವರಿಗೆ ಟೆಂಡರ್ ನೀಡುವ ಬದಲು ಇಂಥವರನ್ನು ಪತ್ತೆ ಮಾಡಿ, ಇವರಿಗೆ ಪ್ರೋತ್ಸಾಹ ನೀಡಿದರೇ ಇವರೇ ನಡೆಸಿಕೊಂಡು ಹೋಗುತ್ತಾರೆ ಎನ್ನುವ ಆಗ್ರಹವೂ ಕೇಳಿಬರುತ್ತದೆ.

Follow Us:
Download App:
  • android
  • ios