ಮೊಗ್ಗಿನ ಜಡೆ ಸರಿಯಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಮದುವೆಯೊಂದು ಮುರಿದುಬಿದ್ದ ಘಟನೆ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಬಿಮಕ್ಕನಹಳ್ಳಿ ಬಳಿಯ ಕಲ್ಯಾಣ ಮಂಟಪವೊಂದರಲ್ಲಿ ನಡೆದಿದೆ.

ಸೂಲಿಬೆಲೆ: ಮೊಗ್ಗಿನ ಜಡೆ ಸರಿಯಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಮದುವೆಯೊಂದು ಮುರಿದುಬಿದ್ದ ಘಟನೆ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಬಿಮಕ್ಕನಹಳ್ಳಿ ಬಳಿಯ ಕಲ್ಯಾಣ ಮಂಟಪವೊಂದರಲ್ಲಿ ನಡೆದಿದೆ.

ಭೀಮಾಪುರ ಗ್ರಾಮದ ಹುಡುಗನಿಗೆ, ದೇವನಹಳ್ಳಿ ತಾಲೂಕಿನ ವಿಜಯಪುರ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಬುಧವಾರ ಆರತಕ್ಷತೆ ನಡೆದಿದ್ದು, ಬಿಮಕ್ಕನಹಳ್ಳಿ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಗ್ಗೆ ಮಹೂರ್ತ ನಿಗದಿಯಾಗಿತ್ತು. ಅದರಂತೆ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಮಹೂರ್ತಕ್ಕೆ ಸಿದ್ಧತೆ ಮಾಡಿಕೊಳ್ಳುವಾಗ ವಧುವಿಗೆ ಮೊಗ್ಗಿನ ಜಡೆ ವಿಷಯವಾಗಿ ಹುಡುಗನ ಕಡೆಯವರಿಂದ ಆಕ್ಷೇಪ ಕೇಳಿಬಂತು.

ಜಡೆ ಸರಿಯಿಲ್ಲ, ಹೂವುಗಳು ಬೇರೆ ಬೇರೆ ಹಾಕಿದ್ದಾರೆ ಎಂಬ ವಿಚಾರ ಮುಂದಿಟ್ಟುಕೊಂಡು ಹುಡುಗನ ಕಡೆಯವರು ಅಸಮಾಧಾನ ಹೊರಹಾಕಿದರು. ಇದು ನಂತರ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಕೊನೆಗೆ ಈ ವಾಗ್ವಾದದಿಂದ ಬೇಸತ್ತ ಹುಡುಗಿ ಕಡೆಯವರು ವಧುವನ್ನು ಕರೆದುಕೊಂಡು ಕಾರಿನಲ್ಲಿ ವಾಪಸ್ ಹೋದರು. ಘಟನೆಗೆ ಸಂಬಂಧಿಸಿ ಯಾವುದೇ ದೂರು ದಾಖಲಾಗಿಲ್ಲ.