ಮುಂಬೈ (ನ. 30): ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲು ನೀಡಬೇಕು ಎಂಬ ಬೇಡಿಕೆಯನ್ನು ರಾಜ್ಯದ ದೇವೇಂದ್ರ ಫಡ್ನವೀಸ್‌ ನೇತೃತ್ವದ ಬಿಜೆಪಿ ಸರ್ಕಾರ ಕೊನೆಗೂ ಈಡೇರಿಸಿದ್ದು, ವಿಧಾನಮಂಡಲದಲ್ಲಿ ಮರಾಠಾ ಮೀಸಲು ವಿಧೇಯಕಕ್ಕೆ ಸರ್ವಾನುಮತದ ಅಂಗೀಕಾರ ದೊರಕಿದೆ. ಈ ಪ್ರಕಾರ ರಾಜ್ಯದಲ್ಲಿ ಮರಾಠಾ ಸಮುದಾಯಕ್ಕೆ ಶೇ.16ರಷ್ಟುಮೀಸಲು ದೊರಕಲಿದೆ.

ಮರಾಠರಿಗೆ ಶಾಲಾ-ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವೇಶ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಮೀಸಲು ದೊರಕುವಂತೆ ವಿಧೇಯಕವನ್ನು ಅಂಗೀಕರಿಸಲಾಗಿದ್ದು, ಅವರನ್ನು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಪ್ರಕಟಿಸಲಾಗಿದೆ.

ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಫಡ್ನವೀಸ್‌ ಅವರು, ಎಲ್ಲ ಪಕ್ಷಗಳು ಮಸೂದೆ ಅಂಗಿಕಾರಕ್ಕೆ ಸಮ್ಮತಿ ಸೂಚಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಮರಾಠರು ಸಂವಿಧಾನದ 15(4) ಹಾಗೂ 16 (2) ಪರಿಚ್ಛೇದದ ಅನ್ವಯ ಮೀಸಲಿಗೆ ಅರ್ಹರಾಗಲಿದ್ದಾರೆ. ಮರಾಠರು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿದ ವರದಿಯನ್ವಯ ಮೀಸಲು ಸೌಲಭ್ಯ ಕಲ್ಪಿಸಲು ಕ್ರಮ ಜರುಗಿಸಲಾಗುತ್ತಿದೆ.

ಮರಾಠಾ ಸಮುದಾಯ ಮಹಾರಾಷ್ಟ್ರದಲ್ಲಿ ಶೇ.30ರಷ್ಟುಜನಸಂಖ್ಯೆ ಹೊಂದಿದೆ. ಹಲವಾರು ವರ್ಷಗಳಿಂದ ಈ ಸಮುದಾಯ ಮೀಸಲು ಹೋರಾಟ ನಡೆಸುತ್ತಿತ್ತು. ಕಳೆದ ಜುಲೈ ಹಾಗೂ ಆಗಸ್ಟ್‌ನಲ್ಲಿ ಇದು ಹಿಂಸಾರೂಪಕ್ಕೆ ತಿರುಗಿತ್ತು.

ಶೇ.50 ಮೀರಲಿರುವ ಮೀಸಲು

ಮೀಸಲು ಶೇ.50 ಮೀರಕೂಡದು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ, ಮಹಾರಾಷ್ಟ್ರ ತನ್ನದೇ ಆದ ಶಾಸನಗಳನ್ನು ರೂಪಿಸಿಕೊಂಡು ಶೇ.52ರಷ್ಟುಮೀಸಲನ್ನು ಈಗಾಗಲೇ ಕಲ್ಪಿಸಿತ್ತು. ಹಾಲಿ ಮೀಸಲು ಪಡೆಯುತ್ತಿರುವ ಸಮುದಾಯಗಳಿಗೆ ಯಾವುದೇ ಭಂಗ ತರದೇ ಹೆಚ್ಚುವರಿಯಾಗಿ ಶೇ.16ರಷ್ಟುಮೀಸಲನ್ನು ಮರಾಠಾ ಸಮುದಾಯಕ್ಕೆ ಈಗ ಸರ್ಕಾರ ನೀಡಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಯಾರಾದರೂ ಇದನ್ನು ಪ್ರಶ್ನಿಸಿದರೆ ಯಾವ ರೀತಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ. 

ಅತಿ ಹೆಚ್ಚು ಮೀಸಲು ಕಲ್ಪಿಸಿರುವ ರಾಜ್ಯಗಳು

ತಮಿಳುನಾಡು: ಶೇ.69

ಮಹಾರಾಷ್ಟ್ರ: ಶೇ.68

ಹರ್ಯಾಣ: ಶೇ.67

1992ರ ಸುಪ್ರೀಂ ಆದೇಶ

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಪ್ರಮಾಣ ಯಾವುದೇ ಹಂತದಲ್ಲಿ ಶೇ.50ರ ಮಿತಿ ದಾಟಬಾರದು

2010ರ ಸುಪ್ರೀಂ ಆದೇಶ

ಖಚಿತ ವೈಜ್ಞಾನಿಕ ದಾಖಲೆಗಳು ಇದ್ದಲ್ಲಿ, ರಾಜ್ಯ ಸರ್ಕಾರಗಳು ಮೀಸಲು ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಬಹುದು