ಸಚಿವರಿಗಿರುವ ನೀತಿ-ಸಂಹಿತೆಯ ಪ್ರಕಾರ ಅವರು ತಮ್ಮ ಹಣಕಾಸು ವ್ಯವಹಾರವನ್ನು ವಾರ್ಷಿಕವಾಗಿ ಪ್ರಧಾನಿ ಕಛೇರಿಯಲ್ಲಿ ಸಲ್ಲಿಸಬೇಕಾಗಿದೆ. ಕಾಮನ್’ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (ಸಿಎಚ್’ಆರ್’ಐ) ಸಂಸ್ಥೆಯು ಆ ದಾಖಲೆಗಳನ್ನು ಪಡೆದಿದೆ, ಆಂಗ್ಲ ದೈನಿಕ ‘ದಿ ಹಿಂದೂ’ ಅದನ್ನು ವರದಿ ಮಾಡಿದ್ದು, ಕೇಂದ್ರ ಸಚಿವರ ನಗದು ಪ್ರಿಯತೆಯನ್ನು ಬಹಿರಂಗಪಡಿಸಿದೆ.
ನವದೆಹಲಿ (ಡಿ.01): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ಬಳಿಕ ದೇಶದ ಜನಸಾಮಾನ್ಯರು ತಮ್ಮ ಹಣ ಪಡೆಯಲು ಬ್ಯಾಂಕು ಹಾಗೂ ಏಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು ಕಳೆದ ಮೂರು ವಾರಗಳಿಂದ ಕಂಡು ಬರುತ್ತಿರುವ ಸರ್ವೆಸಾಮಾನ್ಯ ದೃಶ್ಯ. ಆದರೆ ರಾಜಕಾರಣಿಗಳು ಸರತಿಯಲ್ಲಿ ಬಂದು ಏಕೆ ನಿಲ್ಲುತ್ತಿಲ್ಲ ಎಂದು ಜನರು ಕೇಳುತ್ತಿರುವ ಪ್ರಶ್ನೆ. ಜತೆಗೆ ಸರ್ಕಾರ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ, ಕ್ಯಾಶ್-ಲೆಸ್ ಆರ್ಥಿಕತೆಯನ್ನು ಸಾಧಿಸಲು ನಗದು ವ್ಯವಹಾರವನ್ನು ಕಡಿಮೆಗೊಳಿಸಿ ಇಲೆಕ್ಟ್ರಾನಿಕ್- ಹಣವನ್ನು ಬಳಸಲು ದೇಶದ ಜನರಿಗೆ ಒತ್ತು ನೀಡಿದ್ದಾರೆ.
ಸಚಿವರಿಗಿರುವ ನೀತಿ-ಸಂಹಿತೆಯ ಪ್ರಕಾರ ಅವರು ತಮ್ಮ ಹಣಕಾಸು ವ್ಯವಹಾರವನ್ನು ವಾರ್ಷಿಕವಾಗಿ ಪ್ರಧಾನಿ ಕಛೇರಿಯಲ್ಲಿ ಸಲ್ಲಿಸಬೇಕಾಗಿದೆ. ಕಾಮನ್’ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (ಸಿಎಚ್’ಆರ್’ಐ) ಸಂಸ್ಥೆಯು ಆ ದಾಖಲೆಗಳನ್ನು ಪಡೆದಿದೆ, ಆಂಗ್ಲ ದೈನಿಕ ‘ದಿ ಹಿಂದೂ’ ಅದನ್ನು ವರದಿ ಮಾಡಿದ್ದು, ಕೇಂದ್ರ ಸಚಿವರ ನಗದು ಪ್ರಿಯತೆಯನ್ನು ಬಹಿರಂಗಪಡಿಸಿದೆ.
ದಿ ಹಿಂದೂ ವರದಿಯ ಪ್ರಕಾರ 76 ಕೇಂದ್ರ ಸಚಿವರ ಪೈಕಿ 31 ಮಾರ್ಚ್ 2016 ವರೆಗಿನ ತಮ್ಮ ಬಳಿ ಇರುವ ನಗದು ಹಣದ ಬಗ್ಗೆ ವಿವರವನ್ನು ಸಲ್ಲಿಸಿದವರು ಕೇವಲ 40 ಮಂದಿ.
ಆ ಪೈಕಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅತ್ಯಂತ ಹೆಚ್ಚು ನಗದು ಹೊಂದಿದ್ದಾರೆ. ಅವರು ಹೊಂದಿರುವ ನಗದು ಹಣ ಬರೋಬ್ಬರಿ ರೂ.65 ಲಕ್ಷ. ಸಚಿವ ಶ್ರಿಪಾದ್ ಯೆಸ್ಸೋ ನಾಯಕ್ ಬಳಿ ರೂ.22 ಲಕ್ಷ ಹಣವಿದೆ. ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಬಳಿ ರೂ.10 ಲಕ್ಷ ನಗದು ಹಣವಿದ್ದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿಯೇ ರೂ. 89,700 ನಗದು ಹಣವಿದೆ.
ಇತರ ಪ್ರಮುಖ ಖಾತೆ ಹೊಂದಿರುವ ಸಚಿವರುಗಳಾದ ನಿತಿನ್ ಗಡ್ಕರಿ, ಮನೋಹರ್ ಪರ್ರಿಕರ್, ಉಮಾ ಭಾರತಿ ಮುಂತಾದವರು ವಿವರಗಳನ್ನು ಘೋಷಿಸಿಲ್ಲ.