ಶಿವಮೊಗ್ಗ, ವಿಜಯಪುರ, ಚಿತ್ರದುರ್ಗದಲ್ಲಿ ಮಾತಿನ ಚಕಮಕಿ, ಲಾಠಿ ಚಾರ್ಜ್​ ನಡೆದಿದ್ದು ಬಿಗುವಿನ ವಾತಾವರಣ ನಿರ್ಮಾವಾಗಿದೆ.

ಗಣೇಶನ ಮೂರ್ತಿ ವಿಸರ್ಜನೆ ವೇಳೆ ಹಲವೆಡೆ ಗಲಾಟೆ ನಡೆದಿದೆ. ಶಿವಮೊಗ್ಗ, ವಿಜಯಪುರ, ಚಿತ್ರದುರ್ಗದಲ್ಲಿ ಮಾತಿನ ಚಕಮಕಿ, ಲಾಠಿ ಚಾರ್ಜ್​ ನಡೆದಿದ್ದು ಬಿಗುವಿನ ವಾತಾವರಣ ನಿರ್ಮಾವಾಗಿದೆ. ಸದ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು ಖಾಕಿ ಕಟ್ಟೆಚ್ಚರ ವಹಿಸಲಾಗಿದೆ.

ಶಿವಮೊಗ್ಗದ ಭದ್ರಾವತಿ ನಗರದಲ್ಲಿ ಹಿಂದೂ ಮಹಾಸಭಾ ವತಿಯಿಂದ ಗಣಪತಿ ವಿಸರ್ಜನೆಗೂ ಮೊದಲು ಅದ್ದೂರಿ ಮೆರವಣಿಗೆ ನಡೆಸಲಾಯ್ತು. ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ರಾಜಕೀಯ ಕೆಸರೆರಚಾಟ ನಡೆದಿದೆ.

ನಗರದ ರಥಬೀದಿಯಲ್ಲಿ ಮೆರವಣಿಗೆ ವೇಳೆ ಶಾಸಕ ಅಪ್ಪಾಜಿಗೌಡ ಬೆಂಬಲಿಗರು ಮತ್ತು ಮಾಜಿ ಶಾಸಕ ಸಂಗಮೇಶ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದು ಪೊಲೀಸರ ಮಧ್ಯ ಪ್ರವೇಶ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.

ಇನ್ನು ಶಿವಮೊಗ್ಗ ಮಾತ್ರವಲ್ಲ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನಲ್ಲೂ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದೆ. ಎರಡು ಗುಂಪುಗಳ ನಡುವೆ ಗದ್ದಲ ನಡೆದಿದ್ದು ಪೋಲಿಸರು ಲಾಠಿ ಬೀಸಿದ್ದಾರೆ. ಕುಂಚಿಟಿಗ ಲಿಂಗಾಯಿತ ಜನಾಂಗದವರು ಪ್ರತಿಷ್ಟಾಪಿಸಿದ್ದ ಗಣಪತಿಯನ್ನು ಸಾದ ಲಿಂಗಾಯಿತರ ಹೋಣಿಯಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದ ವೇಳೆ ವಾಗ್ವಾದ ನಡೆದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದ ಘಟನೆಯೂ ನಡೆದಿದೆ.

ಅತ್ತ ವಿಜಯಪುರದ ಕನಮಡಿ ಗ್ರಾಮದಲ್ಲೂ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಗಲಾಟೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಒಟ್ಟಿನಲ್ಲಿ ಗಣೇಶ ಹಬ್ಬದಂದೇ ಹಲವೆಡೆ ಉದ್ವಿಗ್ನ ವಾತಾವರಣ ಉಂಟಾಗಿದ್ದು ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ.