ಪಣಜಿ[ಮಾ.18]: ಮನೋಹರ ಪರ‌್ರಿಕರ್ ಅವರು 2014ರಲ್ಲಿ ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ಫ್ರಾನ್ಸ್ ಜತೆ ರಫೇಲ್ ಯುದ್ಧವಿಮಾನ ಒಪ್ಪಂದವನ್ನು ಭಾರತ ಮಾಡಿಕೊಂಡಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಪರ‌್ರಿಕರ್‌ಗೆ ತಿಳಿಸದೇ ಈ ಒಪ್ಪಂದ ಮಾಡಿಕೊಂಡರು ಎಂಬ ಸುದ್ದಿ ಹರಡಿತು. ಏಕೆಂದರೆ ಒಪ್ಪಂದ ಏರ್ಪಟ್ಟಾಗ ಪರ‌್ರಿಕರ್ ಅವರು ಗೋವಾದಲ್ಲಿ ಮೀನು ಅಂಗಡಿಯೊಂದನ್ನು ಉದ್ಘಾಟಿಸುತ್ತಿದ್ದರು.

ಈ ವಿವಾದ ಈಗಲೂ ಮುಂದುವರಿದಿದ್ದು, ‘ರಫೇಲ್ ಖರೀದಿಯಲ್ಲಿ ಹಗರಣ ನಡೆದಿದೆ. ಪರ‌್ರಿಕರ್‌ಗೆ ಕೇಳದೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಈಗಲೂ ಪರ‌್ರಿಕರ್ ಅವರ ಗೋವಾ ಮನೆಯ ಕೋಣೆಯ ಕಪಾಟಿನಲ್ಲಿವೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಗೋವಾ ಸಚಿವ ವಿಶ್ವಜಿತ್ ರಾಣೆ ಧ್ವನಿ ಹೋಲುವ ಆಡಿಯೋ ಟೇಪನ್ನೂ ಗಾಂಧಿ ಬಿಡುಗಡೆ ಮಾಡಿದರು.

ಆದರೆ ಇದು ಸುಳ್ಳು ಆರೋಪ. ತಮ್ಮ ಮನೆಯಲ್ಲಿ ಅಂಥ ಯಾವುದೇ ಕಡತಗಳಿಲ್ಲ ಎಂದು ಪರ‌್ರಿಕರ್ ಸ್ಪಷ್ಟಪಡಿಸಿದರು.