ಪಣಜಿ[ಸೆ.07]: ಶಿಕ್ಷಕರ ದಿನಾಚರಣೆ ನಿಮಿತ್ತ ಗೋವಾ ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯೊಂದು ನಗೆಪಾಟಲಿಗೆ ಗುರಿಯಾಗಿದೆ. ಸರ್ಕಾರದ ಹೇಳಿಕೆಯ ಪ್ರಕಾರ ದಿವಂಗತ ಮನೋಹರ್‌ ಪರ್ರಿಕರ್‌ ಈಗಲೂ ಗೋವಾದ ಮುಖ್ಯಮಂತ್ರಿಯಾಗಿದ್ದಾರೆ.

‘ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ 56ನೇ ಶಿಕ್ಷಕರ ದಿನಾಚರಣೆಯ ನಿಮಿತ್ತ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ. ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಕೊಡುಗೆಯನ್ನು ಪರ್ರಿಕರ್‌ ಅವರು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ’ ಎಂದು ಮಾಹಿತಿ ಮತ್ತು ಪ್ರಚಾರ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಮಾದ ಬೆಳಕಿಗೆ ಬರುತ್ತಿದ್ದಂತೆ ತಪ್ಪಿತಸ್ಥರನ್ನು ಗುರುತಿಸಲು ತನಿಖೆಗೆ ಆದೇಶಿಸಲಾಗಿದೆ. 2019 ಮಾಚ್‌ರ್‍ 17ರಂದು ಪರ್ರಿಕರ್‌ ನಿಧನರಾಗಿದ್ದರು. ಪ್ರಮೋದ್‌ ಸಾವಂತ್‌ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ.