ಪಣಜಿ: ಮುಂಬರುವ ಪಣಜಿ ವಿಧಾನಸಭಾ ಉಪಚುನಾವಣೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಮನೋಹರ್‌ ಪರ್ರಿಕರ್‌ ಅವರ ಪುತ್ರ ಉತ್ಪಲ್‌ ಕಣಕ್ಕೆ ಇಳಿಯಬಹುದು ಎಂಬ ಊಹಾಪೋಹಗಳ ಬೆನ್ನಲ್ಲೇ, ಇದೀಗ ಪರ್ರಿಕರ್‌ ಪುತ್ರರು ತಮ್ಮ ರಾಜಕೀಯ ಪ್ರವೇಶದ ಕುರಿತು ಸುಳಿವೊಂದನ್ನು ನೀಡಿದ್ದಾರೆ.

ತಮ್ಮ ತಂದೆಯ ಅನಾರೋಗ್ಯದ ವೇಳೆ ನೆರವು ನೀಡಿದವರು ಮತ್ತು ನಂತರದ ಘಟನೆಗಳ ವೇಳೆ ತಮ್ಮೊಂದಿಗಿದ್ದ ಜನರನ್ನು ಸ್ಮರಿಸಿ ಪರ್ರಿಕರ್‌ ಅವರ ಪುತ್ರರಾದ ಉತ್ಪಲ್‌ ಮತ್ತು ಅಭಿಜಿತ್‌ ಶನಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. 

ಅದರಲ್ಲಿ ‘ಮಹಾಪುರುಷರ ಪರಂಪರೆ ಎಂದರೆ ಮಹಾನ್‌ ನಾಯಕರನ್ನು ಸ್ಮರಿಸುವುದು ಮತ್ತು ಅವರು ಬಿಟ್ಟುಹೋದ ಮಹಾನ್‌ ಉದಾಹರಣೆಗಳು. ನಾವು ಕೂಡಾ ಅವರ ಜೀವನವನ್ನು, ರಾಜ್ಯ ಮತ್ತು ದೇಶಕ್ಕಾಗಿ ಅವರು ನಡೆಸಿದ ಸೇವೆ ಮತ್ತು ಸಮರ್ಪಣೆಯನ್ನು ಮುಂದುವರೆಸುವ ಮೂಲಕ ಗೌರವಿಸುತ್ತೇವೆ’ ಎಂದು ಹೇಳಿದ್ದಾರೆ. ಇದು ಪರ್ರಿಕರ್‌ ಪುತ್ರರ ರಾಜಕೀಯ ಪ್ರವೇಶದ ಮುನ್ಸೂಚನೆ ಇರಬಹುದು ಎಂದೇ ವಿಶ್ಲೇಷಿಸಲಾಗಿದೆ.