ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತೆ ಚುನಾವಣಾ ಕಣಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 

ನವದೆಹಲಿ [ಆ.02]: ಬಿಜೆಪಿ ನಾಯಕ ಮದನ್‌ ಲಾಲ್‌ ಸೈನಿ ನಿಧನದಿಂದ ಖಾಲಿಯಾಗಿರುವ ರಾಜಸ್ಥಾನದ ರಾಜ್ಯಸಭಾ ಸ್ಥಾನಕ್ಕೆ ಗುರುವಾರ ಚುನಾವಣೆ ದಿನಾಂಕ ಘೋಷಿಸಲಾಗಿದೆ. 

ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರನ್ನು ಈ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ. 

ಸತತ 5 ಬಾರಿ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಸಿಂಗ್‌ರ ಸದಸ್ಯತ್ವ ಅವಧಿ ಇದೇ ಜೂನ್‌ 14ಕ್ಕೆ ಮುಕ್ತಾಯವಾಗಿತ್ತು. ಆದರೆ ಅಸ್ಸಾಂನಲ್ಲಿ ಕಾಂಗ್ರೆಸ್‌ ಬಹುಮತ ಹೊಂದಿರದ ಕಾರಣ, ಸಿಂಗ್‌ರನ್ನು ಮತ್ತೆ ಅಲ್ಲಿಂದ ಕಳುಹಿಸುವುದು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ. 

ಹೀಗಾಗಿ ಇದೀಗ ರಾಜಸ್ಥಾನದಿಂದ ಅವರನ್ನು ಮರಳಿ ರಾಜ್ಯಸಭೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಆ.26ಕ್ಕೆ ರಾಜಸ್ಥಾನ ರಾಜ್ಯಸಭೆ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.