ಎನ್‌ಎಸ್‌ಎ ಅಡಿ 1 ವರ್ಷ ಸೆರೆವಾಸ: ಕೋರ್ಟ್‌| ಮೋದಿಯ ತುತ್ತೂರಿ ಬೀರೇನ್‌ ಎಂದಿದ್ದ ಪತ್ರಕರ್ತ| ಝಾನ್ಸಿ ರಾಣಿ ಜನ್ಮದಿನ ಆಚರಿಸಿದ್ದಕ್ಕೆ ಆಕ್ರೋಶ

ಇಂಫಾಲ[ಡಿ.20]: ಮಣಿಪುರ ಮುಖ್ಯಮಂತ್ರಿ ಬೀರೇನ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ತುತ್ತೂರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಟೀಕಿಸಿದ್ದ ಮಣಿಪುರದ ಪತ್ರಕರ್ತನೊಬ್ಬನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಸ್ಥಳೀಯ ಟೀವಿ ಪತ್ರಕರ್ತ, 39 ವರ್ಷದ ಕಿಶೋರ್‌ಚಂದ್‌ ವಾಂಗ್‌ಖೇಮ್‌ಗೆ 12 ತಿಂಗಳ ಸೆರೆಮನೆವಾಸವನ್ನು ವಿಧಿಸಲಾಗಿದೆ. ಈ ಕುರಿತು ಮಣಿಪುರದ ಗೃಹ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

ಝಾನ್ಸಿ ರಾಣಿ ಲಕ್ಷ್ಮೇಬಾಯಿ ಜನ್ಮ ದಿನವನ್ನು ನ.19ರಂದು ಮಣಿಪುರ ಸರ್ಕಾರ ಆಚರಣೆ ಮಾಡಿತ್ತು. ಈ ಬಗ್ಗೆ ಕಿಶೋರ್‌ಚಂದ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಣಿಪುರಕ್ಕೂ ಝಾನ್ಸಿ ರಾಣಿ ಅವರಿಗೂ ಏನೂ ಸಂಬಂಧವಿಲ್ಲ. ಕೇಂದ್ರ ಸರ್ಕಾರ ಸೂಚಿಸಿತು ಎಂದು ರಾಜ್ಯ ಸರ್ಕಾರ ಈ ದಿನವನ್ನು ಆಚರಣೆ ಮಾಡಿದೆ. ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಹಾಗೂ ಹಿಂದುತ್ವದ ತುತ್ತೂರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ನ.19ರಂದು ಕಿಶೋರ್‌ ಚಂದ್‌ ಬರೆದಿದ್ದರು. ನ.26ರಂದು ಅವರನ್ನು ಬಂಧಿಸಲಾಗಿತ್ತು. ಎನ್‌ಎಸ್‌ಎಗೆ ಸಂಬಂಧಿಸಿದ ಸಲಹಾ ಮಂಡಳಿ ಕಿಶೋರ್‌ಚಂದ್‌ಗೆ ಶಿಕ್ಷೆ ವಿಧಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.

ಕಿಶೋರ್‌ ಬಂಧನವನ್ನು ಭಾರತೀಯ ಪತ್ರಕರ್ತರ ಒಕ್ಕೂಟ ಹಾಗೂ ಭಾರತೀಯ ಪತ್ರಿಕಾ ಮಂಡಳಿಗಳು ಖಂಡಿಸಿವೆ. ಆದರೆ ಫೇಸ್‌ಬುಕ್‌ನಲ್ಲಿ ಬರೆದಿದ್ದು ಪತ್ರಿಕೋದ್ಯಮವಲ್ಲ ಎಂಬ ಕಾರಣಕ್ಕೆ ಮಣಿಪುರ ಕಾರ್ಯನಿರತ ಪತ್ರಕರ್ತರ ಸಂಘ ಕಿಶೋರ್‌ ಬೆಂಬಲಕ್ಕೆ ಬಂದಿಲ್ಲ.