ನವದೆಹಲಿ(ಮೇ.12): ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನೀಚ್ ಆದ್ಮಿ(ಕೀಳು ಮನುಷ್ಯ) ಎಂದು ವಿವಾದ ಸೃಷ್ಟಿಸಿದ್ದ ಮಾಜಿ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್, ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ತಾವು ಆಡಿದ ಪ್ರತಿಯೊಂದೂ ಶಬ್ಧಕ್ಕೂ ಈಗಲೂ ಬದ್ಧವಾಗಿದ್ದು, ಸೈನಿಕರ ತ್ಯಾಗವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಂಡ ಮೋದಿಗೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಹರಿಹಾಯ್ದಿದ್ದಾರೆ.

ತಮ್ಮ ಅಭಿಪ್ರಾಯದಂತೆ ಮೋದಿ ಓರ್ವ ನಾಗರಿಕ ವ್ಯಕ್ತಿಯೇ ಅಲ್ಲ ಎಂದಿರುವ ಮಣಿಶಂಕರ್, ತಮ್ಮ ರಾಜಕೀಯ ಲಾಭಕ್ಕೆ ಮೋದಿ ಯಾರನ್ನಾದರೂ ಬಳಸಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

2017ರ ಡಿಸೆಂಬರ್‌ನಲ್ಲಿ ಪತ್ರಿಕೆಯೊಂದರಲ್ಲಿ ಅಂಕಣ ಬರೆದಿದ್ದ ಅಯ್ಯರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ್ ಆದ್ಮಿ ಎಂದು ಹೇಳಿಕೆ ನೀಡಿ ಪಕ್ಷದಿಂದಲೇ ಅಮಾನತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.